ಅನುದಿನ‌ ಕವನ-೫೮೬, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು

ನೀ ಮುತ್ತು ಕೊಟ್ಟ
ಗಲ್ಲಕೆ; ಮುತ್ತುತಿವೆ
ಇರುವೆ ದಂಡು

ಆಗಾಗ ಭಾವ
ಉಕ್ಕಿ; ಕವಿ ಬರೆವ
ಎದೆಯ ಹಾಡು

ನಾ ಬರೀ ತಂತಿ
ಹರಿವ ಅಗೋಚರ
ಶಕ್ತಿ ಅವಳು

ತುಟಿಗಳಲಿ
ತುಂಬಿ ನಿಂತ ತಾರುಣ್ಯ
ತಕದಿಮಿತ

ಅವ್ವಗವ್ವನೇ
ಸಾಟಿ; ಅವನಿಯಲಿ
ಮಿಗಿಲಾರಿಲ್ಲ

ಭೂಮಿಯಾಳಕೆ
ಬೇರು; ನಕ್ಷತ್ರಪುಂಜ
ಅರಳಿದ ಹೂ

ಸಂಜೆ ಕೆಂಪಿಗೆ
ಹಾಲಿನ ಕಂಪು; ಮಧು
ಚಂದ್ರಕೆ ರಂಗು

ಭುಜಕೆ ತಲೆ
ಇಟ್ಟು ಮಧುರ ಮಾತು;
ಕನಸೊಡತಿ

ಹಕ್ಕಿ ಗೂಡಲಿ
ಚಿಲಿಪಿಲಿ; ಆಶ್ರಿತ
ಮರಕಾನಂದ
೧೦
ಮಳೆ ಆರ್ಭಟ
ತ್ರಸ್ತ ಬದುಕು; ನೀರ
ಮೇಲಿನ ಗುಳ್ಳೆ

– ಸಿದ್ದಲಿಂಗಪ್ಪ ಬೀಳಗಿ, ಹುನಗುಂದ
*****