ಅನುದಿನ‌ ಕವನ-೫೮೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಹೆಗ್ಗಣಗಳು

ಹೆಗ್ಗಣಗಳು

ಮೊದ ಮೊದಲು ಈ ಇಲಿಗಳು
ಮನೆಯಲ್ಲಿ ಸೇರಿಕೊಂಡಾಗ
ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ
ಇದ್ದರಿರಲಿ ಆಮೇಲೆ
ನೋಡಿದರಾಯ್ತೆಂದೆವೆಲ್ಲ
ಅಲ್ಲಲ್ಲಿ ಸಿಕ್ಕಿದ್ದ
ಕಾಳು ಕಡಿಗಳ ಗೊತ್ತಿಲ್ಲದಂತೆ
ತಿಂದುಕೊಂಡಿದ್ದುವೆಲ್ಲ
ಆಮೇಲೆ ಇಲಿಗಳೆಲ್ಲ
ಹೆಗ್ಗಣಗಳಾದವು
ನಮ್ಮೆದುರೇ ರಾಜಾರೋಷವಾಗಿ
ತಿನ್ನತೊಡಗಿದವು
ನಾವು ದನಿಯೆತ್ತದಂತೆ
ಕಣ್ಣು ಕೆಂಪಗೆ ಮಾಡಿದವು
ತಿಂದಿರುವುದ ಆಪಾದಿಸಿದರೆ
ತಿಂದೇ ಇಲ್ಲವೆಂದು ವಾದಿಸಿದವು

ಇವೆಲ್ಲ ಇಲಿಗಳಾಗಿದ್ದಾಗಲೇ
ಬೆಕ್ಕನ್ನು ಸಾಕಬೇಕಿತ್ತೆಂದು
ಈಗ ಅನಿಸುತಿದೆ
ಯಾಕೆಂದರೆ ಈ ಹೆಗ್ಗಣಗಳು
ಈಗ ಬೆಕ್ಕನ್ನೇ ತಿನ್ನುವಂತೆ ಕೊಬ್ಬಿವೆ
ಮನೆಯನ್ನು ಹಾಳು ಮಾಡುವುದ
ವಿರೋಧಿಸಲು ಹೋದರೆ
ನಮ್ಮನ್ನೆ ತಿನ್ನುವಂತಾಗಿವೆ

ಮನೆ ಎನ್ನುವುದು ಈಗೀಗ
ರಣರಂಗದಂತಾಗಿಬಿಟ್ಟಿದೆ
ಅಲ್ಲಲ್ಲಿ ರಕ್ತದ ಕಲೆಗಳು
ಕನ್ನ ಕೊರೆದಂತೆ ಕೊರೆದ
ದೊಡ್ಡ ಬಿಲಗಳು
ಯಾರ ಕೈಗೂ ಸಿಗದಂತೆ
ನಿರ್ಮಿಸಿರುವ ಸುರಂಗ ಮಾರ್ಗಗಳು

ಅಂದಹಾಗೆ-
ಈ ಹೆಗ್ಗಣಗಳಿಗೆ
ಇತ್ತೀಚೆಗೆ ನಮ್ಮ ರಕ್ತ ಮಾಂಸದ
ರುಚಿಯೂ ಹತ್ತಿದೆ
ಹೀಗಾಗಿ ಹೆಗ್ಗಣಗಳೂ
ನರಭಕ್ಷಕಗಳಾಗುತ್ತಿವೆ
ಮನೆತುಂಬ ಈಗ
ಈ ಹೆಗ್ಗಣಗಳದ್ದೇ ಕಾರುಬಾರು
ಇವೆಷ್ಟು ಬುದ್ಧಿವಂತ ಆಗಿವೆಯೆಂದರೆ
ತಮ್ಮ ಬಗ್ಗೆ ಕವಿತೆ
ಬರೆಯಬಾರದೆಂದು
ಬೆರಳುಗಳನ್ನೇ ಕಚ್ಚಿ ತಿಂದುಬಿಟ್ಟಿವೆ
ಪೆನ್ನುಗಳನ್ನೆಲ್ಲ ಕಸಿದಿವೆ

ಈಗ ಮನೆಯಲ್ಲೆಲ್ಲ
ಬೆರಳುಗಳನ್ನು
ಕತ್ತರಿಸಿಕೊಂಡಿರುವವರೇ
ಹೆಚ್ಚು
ಹಗಲಿರುಳೂ ಹೆಗ್ಗಣಗಳ ಬಗ್ಗೆ
ಮಾತನಾಡಲೂ
ಭಯಪಡುತ್ತಿರುವವರೇ
ಹೆಚ್ಚು

ಈಗ……………
ಮೂಲೆಯಲೊಬ್ಬ
ಹೆಗ್ಗಣಗಳ ಬಗ್ಗೆಯೇ
ಕವಿತೆ ಬರೆಯಲು ಕುಳಿತಿದ್ದಾನೆ
ಮನೆಯ ದುಸ್ಥಿತಿಯ ಬಗ್ಗೆ
ವ್ಯಥೆಪಡುತ್ತಿದ್ದಾನೆ
ಹೆಗ್ಗಣಗಳೆಲ್ಲವೂ ಈಗ
ಅವನನ್ನೇ ದಿಟ್ಟಿಸಿ ನೋಡುತ್ತಿವೆ
ಅರೆ……
ಅವನು
ನಾನು !


-ಸಿದ್ಧರಾಮ ಕೂಡ್ಲಿಗಿ