ಬಳ್ಳಾರಿ, ಆ. 14: ಸಾಮರಸ್ಯದ ಕೊರತೆಯಿಂದ ಸಮಾಜ ಆತಂಕದ ಕಡೆ ಸಾಗುತ್ತಿದೆ ಎಂದು ಉಪನ್ಯಾಸಕ ಡಾ. ಯು ಶ್ರೀನಿವಾಸ್ ಮೂರ್ತಿ ವಿಷಾಧಿಸಿದರು.
ನಗರದ ಸಿರುಗುಪ್ಪ ರಸ್ತೆಯ ವಿರಾಟ್ ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮ ಶ್ರಾವಣ ಸಂಜೆ ರಾಗ ರಂಗ್ ಮಾಸಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಭಾಷೆ ಎನಿಸುವ ಸಂಗೀತವು ಮಾನವನ ಸಮೂಹದ ಸಾಂಸ್ಕೃತಿಕ ರಾಯಭಾರಿಯಾಗಿ ವಿಶ್ವ ಭಾತೃತ್ವಕ್ಕೆ ಕಾರಣವಾಗ ಬಲ್ಲದು ಮಾತ್ರವಲ್ಲ ವಿಕೃತ ಮನಸ್ಸುಗಳ ಭರಾಟೆಗೆ ಸಂಗೀತ ಸಿದ್ದೌಷದ ವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಮಕ್ಕಳು ಸಂಗೀತ ಅಭ್ಯಾಸ ಮಾಡುವುದರಿಂದ ವೈಜ್ಞಾನಿಕವಾಗಿ ಮೆದುಳಿನ ಬೆಳವಣಿಗೆ ಉತ್ತಮವಾಗಿ ಆಗುತ್ತದೆ ಮಾತ್ರವಲ್ಲದೆ ಏಕಾಗ್ರತೆ ಹೆಚ್ಚಿ ತರಗತಿಯ ಪಠ್ಯ ವಿಷಯಗಳನ್ನು ತುಂಬಾ ಚೆನ್ನಾಗಿ ಅರ್ಥೈಸಿಕೊಳ್ಳ ಬಲ್ಲರು ಎಂದರು.
ಸಂಗೀತ ಸಾಹಿತ್ಯ ಕೌಶಲ ನೀಡುವುದರ ಜೊತೆಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಹಿರಿಯರಿಗೆ ಒತ್ತಡಯುಕ್ತ ಬದುಕಿನ ಇಂತಹ ದಿನಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ನೆಮ್ಮದಿ ನೀಡಬಲ್ಲದೆಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಗಂಗಾಧರ ಹಿಂದುಸ್ತಾನಿ ಸಂಗೀತ ಹಾಡಿದರು ಮತ್ತು ಪುಟ್ಟರಾಜ್ ಸುಗಮ ಸಂಗೀತ ಹಾಡಿದರು. ಯೋಗೀಶ್ ತಬಲ ನುಡಿಸಿದರು. ದೊಡ್ಡ ಬಸವ ಗವಾಯಿ ಹಾರ್ಮೋನಿಯಂ ಸಾತ್ ಮಾಡಿದರು ಮತ್ತು ಅನೇಕ ವಿದ್ಯಾರ್ಥಿಗಳು ಸಂಗೀತ ಹಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸಿದ್ದರಾಮಪ್ಪ, ವಿಜಯಮ್ಮ, ಕವಿತಾ, ಶಾಂತಿ ಮತ್ತಿತರರು ಭಾಗವಹಿಸಿದ್ದರು
*****