ಅನುದಿನ ಕವನ-೫೯೨, ಕವಿ: ಕೆ.ಬಿ. ವೀರಲಿಂಗನಗೌಡ್ರ, ಸಿದ್ಧಾಪುರ, ಕವನದ ಶೀರ್ಷಿಕೆ: ಪ್ರೀತಿ ಎಂದರೆ ಸಾಕಿ…

ಪ್ರೀತಿ ಎಂದರೆ ಸಾಕಿ…

ಸಾಕಿ..
ಪ್ರೀತಿ ಎಂದರೆ
ಗುಟ್ಟಾಗಿ ಗುನುಗುವುದಲ್ಲ
ಸುಟ್ಟ ರೊಟ್ಟಿಯಂತಾಗುವುದು

ಸಾಕಿ..
ಪ್ರೀತಿ ಎಂದರೆ
ಕಾದು ಕೆನೆಗಟ್ಟುವುದಲ್ಲ
ಹೆಪ್ಪುಗಟ್ಟಿ ತುಪ್ಪದಂತಾಗುವುದು

ಸಾಕಿ..
ಪ್ರೀತಿ ಎಂದರೆ
ಹಾರಾಡುವುದಲ್ಲ
ಫೀನಿಕ್ಸ್ ಹಕ್ಕಿಯಂತಾಗುವುದು

ಸಾಕಿ..
ಪ್ರೀತಿ ಎಂದರೆ
ಮಥಿಸುವುದಲ್ಲ
ಮಾನವೀಯತೆಯ ಸ್ತುತಿಸುವುದು

ಸಾಕಿ..
ಪ್ರೀತಿ ಎಂದರೆ
ಶರಣಾಗುವುದಲ್ಲ
ಶರಣ ಸಂಸ್ಕೃತಿಗೆ ಅಣಿಯಾಗುವುದು

ಸಾಕಿ..
ಪ್ರೀತಿ ಎಂದರೆ
ಮುದ್ದಾಡುವುದಲ್ಲ
ಎದ್ದುಹೋಗಿ ಬುದ್ಧನಂತಾಗುವುದು


-ಕೆ.ಬಿ. ವೀರಲಿಂಗನಗೌಡ್ರ, ಸಿದ್ಧಾಪುರ
*****