ಎದ್ದಿದ್ದೆ, ಎಚ್ಚರಿರಲಿಲ್ಲ
ಚುಮುಚುಮು ನಸುಕು ಹರಿವಾಗ
ಹಚ್ಚಡದಲಿ ಕನಸ ಮಿಸುಕಾಟ
ಎದ್ದಿದ್ದೆ ಎಚ್ಚರಿರಲಿಲ್ಲ
ಬಿದ್ದಿದ್ದೆ ಕಾಲುಜಾರಿ,
ಪೆಟ್ಟು ತಿಳಿಯಲಿಲ್ಲ
ದಿನದ ಕಾಯಕಕೆ ಕೈಯಾದೆ
ಬಳೆನಾದವಾಗದೆ
ಬಿಸಿಚಹಕೆ ಸಕ್ಕರ ಬೆರೆಸಿ
ಹಾದಿಕಾದೆ ಸಿಹಿಯಾಗದೆ
ಚಹಾ ತುಳುಕಿತು ಕೈ ನಡುಗಿ
ನೀನಿಲ್ಲದೆ ಗಂಟಲಿಗಿಳಿಯದೆ
ರುಚಿಗೆಟ್ಟು ಉಪ್ಪಿನ ಬನಿ
ನಿನ್ನ ನೆನಪಿನ ಕಂಬನಿ
ಬಿಸಿ, ಘಮಲು, ಹಂಚಿಕೊಳುವ ಮಾತುಗಳು
ಮೊರೆಯುವ ವಿರಹದ ಕೊಡುಕೊಳು
ಒಂದು ಭೇಟಿಯ ಬಾಕಿ ತೀರಿಸದೆ
ದೂರವಿದ್ದರೆ ಹೀಗೆ
ಚಹಾ ಹಂಚಿ ಕುಡಿದು
ಹಗುರಾಗುವುದು ಹೇಗೆ..?
-ಸುಧಾ ಚಿ ಗೌಡ, ಹಗರಿ ಬೊಮ್ಮನಹಳ್ಳಿ
*****