ಅನುದಿನ ಕವನ-೫೯೮, ಕವಿ:ಸಖ, ಶಿಡ್ಲಘಟ್ಟ, ಕವನದ ಶೀರ್ಷಿಕೆ: ಆಸೆ

ಆಸೆ

ತೆಪ್ಪಗೆ
ನಾನು ನನ್ನ ಪಾಡಿಗೆ
ಯಾರ ಆಸರೆಗೂ
ಹಾತೊರೆಯದೇ
ಯಾರ ನಿರ್ಲಕ್ಷ್ಯಕೂ
ನೋಯದೇ
ಅವರ ಪಾಡಿಗೆ
ಅವರ ಬಿಟ್ಟು
ನನ್ನ ಹಾಡಿಗೆ ನಾನು
ತಲೆದೂಗಬೇಕು

ಅಟ್ಟಹಾಸಗಳಿಗೆ
ಕಿವುಡಾಗಿ
ಅಹಂಕಾರಗಳಿಗೆ
ಕುರುಡಾಗಿ
ಅಸೂಯೆಗಳಿಗೆ
ಕಣ್ಣು ಹೊಡೆದು
ನನ್ನ ಮನದ ಮಾತುಗಳಿಗೆ
ಮೌನ ಕಲಿಸಬೇಕು

ತಿರುಗಬೇಕು
ತಿನ್ನಬೇಕು ನೋವನೊರತುಪಡಿಸಿ
ಅಲೆಯಬೇಕು ಒಬ್ಬನೇ
ಒಂದು ಹಾಡು
ಬೆನ್ನಿಗಂಟಿಸಿಕೊಂಡು
ಪ್ರಯಾಣದ ಗಾಳಿಯಲಿ
ಉಸಿರು ಲೀನವಾಗುವರೆಗೂ…..
ದಿವ್ಯ ಮೌನ ನನ್ನದಾಗುವವರೆಗೂ….

-ಸಖ
(ಎಸ್. ಕಲಾಧರ್, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ)

*****