ಅನುದಿನ ಕವನ-೬೦೨, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಪ್ರೇಮದ ಪರಿ ಪರಿ…

“ಇದು ಪ್ರೇಮದ ಪರಿ ಪರಿ ಸ್ಫುರಣಗಳ ಸುಂದರ ಕವಿತೆ. ಅನುರಾಗದ ಅನುಪಮ ಸ್ವರಗಳ ಮಧುರ ಭಾವಗೀತೆ. ಓದಿ ನೋಡಿ.. ಮನವರಳಿಸಿ ಮುದನೀಡಿ ಮಾರ್ದನಿಸುತ್ತದೆ. ಏಕೆಂದರೆ ಇಲ್ಲಿ ಸೆಳೆಯುವ ಭಾವಕಿರಣಗಳ ಸೌಂದರ್ಯವಿದೆ. ಕಚಗಳಿಯಿಡುತ ಕುಣಿಸುವ ಜೀವಸಂವೇದನೆಗಳ ಮಾಧುರ್ಯವಿದೆ” ಎಂದು‌ ಹೇಳುತ್ತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು ತಮ್ಮ ‘ಪ್ರೇಮದ ಪರಿ ಪರಿ’ ಕವನದಲ್ಲಿ!👇

ಪ್ರೇಮದ ಪರಿ ಪರಿ..!

ಸಂತೆಯಲ್ಲಿ ಅವಳಿಗೆ ನೆನಪಾಗುವುದಿಲ್ಲ ನಾನು
ಚಿಂತೆಯಲ್ಲಿ ಥಟ್ಟನೆ ನೆನಪಾಗುವುದೇ ನಾನು
ಚಪ್ಪಾಳೆ ತಟ್ಟಲು ಸಾವಿರ ಮಂದಿ ಸಿಕ್ಕಾರೇನೊ
ಕಣ್ಣೀರೊರೆಸಲು ಮಾತ್ರ ನಾನೇ ಇರಬೇಕು
ಪ್ರೀತಿಯೆಂದರೆ ಹೀಗೆಯೇ ಯುಗ ಯುಗಕು.!

ಎಲ್ಲರೊಂದಿಗೆ ರಾಶಿ ರಾಶಿ ಮಾತಿನ ವರಾತ
ನನ್ನೊಂದಿಗೆ ಅಕ್ಷರಶಃ ಮಾತಿಲ್ಲದ ನಿರ್ವಾತ
ಮಾತುಗಳ ಹರವಲು ನೂರು ಮಂದಿ ಇದ್ದರೂ
ಮೌನ ಹಂಚಿಕೊಳ್ಳಲು ನಾನೊಬ್ಬನೆ ಬೇಕು
ಒಲವೆಂದರೆ ಹೀಗೇಯೇ ಪ್ರತಿ ಜೀವ ಜೀವಕು.!

ಎಲ್ಲರೆದುರು ಮೂರ್ಖತನದ ಪರಮಾವಧಿ
ನನ್ನೆದುರು ಪ್ರದರ್ಶಿಸುವಳು ಅತಿಮತಿ ಬುದ್ದಿ
ಮೂರ್ಖತೆ ಒಪ್ಪಿಕೊಳ್ಳಲು ಎಷ್ಟೇ ಜನರಿದ್ದರೂ
ಬುದ್ದಿವಂತಿಕೆ ಮೆಚ್ಚಿಕೊಳ್ಳಲು ನಾನೇ ಬೇಕು.!
ಪ್ರೇಮವೆಂದರೆ ಹೀಗೆಯೇ ಸಕಲ ಹೃನ್ಮನಕು.!

ಯಾರೇನಂದರು ಎದುರಾಡದ ಸೌಮ್ಯರೂಪಿ
ನನ್ನೊಂದಿಗೆ ಪ್ರತಿ ಮಾತಿಗೂ ಕಲಹರೂಪಿ
ಸಕಲರ ಟೀಕೆ ಟಿಪ್ಪಣಿಗೆ ಲಕ್ಷ್ಯವೆ ಕೊಡದಿದ್ದರೂ
ಮುನಿಸು ಜಗಳಗಳಿಗೆ ನಾನೇ ಆಗಬೇಕು
ಅನುರಾಗವೆಂದರೆ ಹೀಗೆಯೇ ನಿತ್ಯ ಅನುದಿನಕು.!

ಒಲವಿನ ಜೀವ-ಭಾವಗಳ ಪರಿಯೇ ಹೀಗೆ
ಜಗಬಯಲಲಿ ಜಲಪಾತದಂತೆ ಧುಮ್ಮಿಕ್ಕಿದರೂ
ಒಲುಮೆಯ ಮಡಿಲಲಿ ಮಂಜಾಗುವ ಸಾಗರಿ
ಲೋಕದ ಕಣ್ಣೆದುರು ದೇವಕಿನ್ನರಿಯಂತಿದ್ದರೂ
ಒಲಿದವನೆದೆಯ ಕಾಡುವ ಮುದ್ದು ರಾಕ್ಷಸವತಾರಿ.!

-ಎ.ಎನ್.ರಮೇಶ್, ಗುಬ್ಬಿ.
*****