ಮಹಾ ಸಭ್ಯಸ್ಥನ ಪ್ರವರ
ಬಾಯಿ ಬಿಟ್ಟರೆ
ಆದರ್ಶ-ತತ್ವಗಳನ್ನೇ
ಶಂಕ ಜಾಗಟೆ ಹೊಡೆಯುವ
ಮಹಾ ಸಭ್ಯಸ್ಥ…..
ಅನ್ಯಾಯಕ್ಕೆ ಕಾವಲಿರುತ್ತಾನೆ
ಕುತಂತ್ರಿಗಳ ಬೆನ್ನು ತಟ್ಟುತ್ತಾನೆ
ಬೆನ್ನ ಹಿಂದಿನ ಟೀಕೆಗಳನ್ನು
ನಗುತ್ತಲೇ ಕೊಡವಿಕೊಳ್ಳುತ್ತಾನೆ
ತಪ್ಪು ಎತ್ತಿ ತೋರಿಸಿದವರ ಮೇಲೆಯೇ
ಧುತ್ತೆಂದು ಮುಗಿಬೀಳುತ್ತಾನೆ
ಧರ್ಮ ಸಂದೇಶಗಳನ್ನು
ಪುಕ್ಕಟೆಯಾಗಿ ಹಂಚುವ ಜ್ಞಾನಿ
ತಾನು ಅಳವಡಿಸಿಕೊಳ್ಳಲಾರ
ಹಾದರಕ್ಕೆ ರತ್ನಗಂಬಳಿ ಹಾಸುವ
ಮೋಸದಾಟಗಳಿಗೆ ಇಂಬು ನೀಡುವ ಚಾಲಾಕಿ…
ಸಾಚಾನಂತೆ ಫೋಸು ಕೊಡುತ್ತಾನೆ
ಒಡೆದು ಆಳುವ ತಂತ್ರ ಚಲಾಯಿಸುತ್ತಾನೆ
ಮನುಷ್ಯನಾಗಲೂ ಅರ್ಹತೆಯಿಲ್ಲದವ
ದೇವರಾಗುವ ಕನಸು ಕಾಣುತ್ತಾನೆ
ಸಮತೆಯ ಮಂತ್ರ ಪಠಿಸುತ್ತಾ
ಒಳಗೊಳಗೆ ಜಾತಿಯ ಕತ್ತಿ ಮಸೆಯುತ್ತಾನೆ
ನಮ್ಮೊಳಗೋ…. ನಿಮ್ಮೊಳಗೋ….
ಗೋಮುಖವ್ಯಾಘ್ರದಂತೆ ಹುದುಗಿಕೊಂಡು
ಮರಳು ಮಾಡುತ್ತಾನೆ
ಕೊನೆಗೆ ಹುರಿದು ಮುಕ್ಕುತ್ತಾನೆ!
-ನಾಗೇಶ್ ಜೆ. ನಾಯಕ, ಸವದತ್ತಿ