ಅನುದಿನ ಕವನ-೬೦೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಮನುಜ ಪ್ರೀತಿ

ಮನುಜ ಪ್ರೀತಿ

ಭವಸಾಗರದಲ್ಲಿ ನೋವುಗಳ ಹೊಳೆಯೇ ಹರಿದು ಸೇರುತಿರಲಿ||
ಬೀಸಿ ಬರುವ ಬಿರುಗಾಳಿ ತಡೆದು ಬಾಳ ನೌಕೆ ತೇಲುತಿರಲಿ||

ನಿನ್ನ ಭರವಸೆಗಳೆಂದೂ ಹುಸಿಯಾಗುವುದಿಲ್ಲ|
ಕವಿದ ಕಾರ್ಮೋಡಗಳು ಸರಿದು ಕಂಡ ಕನಸು ನನಸಾಗುತಿರಲಿ||

ನಿನ್ನ ಆಶಾಗೋಪುರವೆಂದೂ ಕಳಚಿ ಬೀಳುವುದಿಲ್ಲ|
ಮೇಲೆ ಏರಲು ಉಂಡ ನೋವುಗಳನ್ನೇ ತುಳಿದು ಮೆಟ್ಟಿಲಾಗಿಸುತಿರಲಿ||

ನಿನ್ನ ಮನಸ್ಸೆಂದೂ ಮರಭೂಮಿಯಾಗುವುದಿಲ್ಲ|
ಒಲವ ತುಂಬಿದ ಹೃದಯ ಮನುಜ ಪ್ರೀತಿ ಸದಾ ಹಂಚುತಿರಲಿ||

ನಿನ್ನ ಭಾವನೆಗಳೆಂದೂ ಬರಿದಾಗುವುದಿಲ್ಲ|
ಕಣ್ಣ ತುಂಬ ಸೊಗಸು ತುಂಬಿ ಬೆಳದಿಂಗಳಂತೆ ಕಂಗೊಳಿಸುತಿರಲಿ||

ನಿನ್ನ ಮುನಿಸುಗಳೆಂದೂ ಬಿರುಕುಗಳಾಗುವುದಿಲ್ಲ|
ಗುಟ್ಟನೆಲ್ಲ ಕಟ್ಟಿಕೊಂಡು ‘ಗಟ್ಟಿಸುತ’ನ ಸುತ್ತ ಗಿರಕಿ ಹೊಡೆಯುತಿರಲಿ||


-ಎಂ.ಡಿ.ಬಾವಾಖಾನ ಸುತಗಟ್ಟಿ. ಬೆಳವಡಿ