ಕಾಡುತ್ತಿರುವ ನಡೆದಾಡುವ ದೇವರು! -ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಯಾಕೋ ಒಂದು ವಾರದಿಂದ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ನೆನಪು ನನ್ನನ್ನು ಕಾಡುತ್ತಿದೆ. ನನ್ನ ತಾಯಿಯ ಊರು ಕ್ಯಾತ್ಸಂದ್ರ ಹಾಗಾಗಿ ಬಾಲ್ಯದಿಂದಲೂ ಸ್ವಾಮಿಗಳನ್ನು ಹತ್ತಿರದಿಂದ ನಾನು ಬಲ್ಲೆ. ಎಸ್ ಎಸ್ ಎಲ್ ಸಿ ಮುಗಿದ ಬಳಿಕ ಅವರ ಕೃಪಾಶಿರ್ವಾದದಿಂದಲೇ ನನಗೆ ತುಮಕೂರಿನ ಸಿದ್ದಗಂಗಾ ಶಿಕ್ಷಕರ ತರಬೇತಿ ಶಾಲೆಯಲ್ಲಿ ಟಿಸಿಹೆಚ್ ಮಾಡುವ ಅವಕಾಶ ದೊರೆಯಿತು. ಅದು 1987-88ರ ಕಾಲಘಟ್ಟ ಈಗಿನಂತೆ ಟಿಸಿಹೆಚ್ ಕಾಲೇಜುಗಳು ಅಣಬೆಗಳಂತಿರಲಿಲ್ಲ. ಟಿಸಿಹೆಚ್ ಓದಲು ಸೀಟು ಕೂಡ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ.
ನಾನು ಟಿಸಿಹೆಚ್ ಎರಡನೇ ವರ್ಷದಲ್ಲಿದ್ದಾಗ ರೂ.3500 ಬೋಧನಾ ಶುಲ್ಕವನ್ನು ಕಟ್ಟಬೇಕಾಗಿತ್ತು. ನನಗೆ ಅಷ್ಟು ಶುಲ್ಕ ಬರಿಸಲು ಕಷ್ಟವಾಗಿತ್ತು. ಆಗ ಸಿದ್ದಗಂಗಾ ಮಠದಿಂದ ಬರುತ್ತಿದ್ದ ವಿದ್ಯಾರ್ಥಿಗಳು ಬುದ್ದಿಯವರ ಬಳಿ ಒಂದು ಅರ್ಜಿ ಬರೆದುಕೊಂಡು ಹೋಗಿ ಕೊಡು, ಕಡಿಮೆ ಮಾಡಿ ಕೊಡುತ್ತಾರೆ ಎಂದು ಹೇಳಿದರು. ನಾನು ಮರು ಮಾತನಾಡದೆ “ನಾನು ಬಡ ಕುಟುಂಬದಿಂದ ಬಂದಿದ್ದು ನನಗೆ ರೂ.3500 ಶುಲ್ಕ ಪಾವತಿಸುವುದು ಕಷ್ಟಕರ ದಯಮಾಡಿ ರಿಯಾಯಿತಿ ಕೊಡಬೇಕಾಗಿ ಪ್ರಾರ್ಥನೆ” ಎಂದು ಅರ್ಜಿ ಬರೆದುಕೊಂಡು ಹೋಗಿ ಬುದ್ಧಿಯವರ (ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ನಾವು ಇಂದಿಗೂ ಬುದ್ದಿಯವರು ಎಂದು ಕರೆಯುವುದು ವಾಡಿಕೆ) ಕೈಗೆ ಅರ್ಜಿ ನೀಡಿ ಕಾಲಿಗೆ ನಮಸ್ಕರಿಸಿದೆ. ಬುದ್ದಿಯವರು ಅರ್ಜಿಯನ್ನು ಸಂಪೂರ್ಣವಾಗಿ ಓದಿ “ಚನ್ನಾಗಿ ಓದಬೇಕು, ಮಠಕ್ಕೆ ಕೀರ್ತಿ ತರಬೇಕು” ಎಂದು ಆಶೀರ್ವಚನ ನೀಡಿ ಅರ್ಜಿಯ ಮೇಲೆ ಹಸಿರು ಶಾಹಿಯ ಪೆನ್ನ್ ನಲ್ಲಿ ಈ ವಿದ್ಯಾರ್ಥಿಯ ಬಳಿ ರೂ.500 ಶುಲ್ಕ ಮಾತ್ರ ಕಟ್ಟಿಸಿಕೊಳ್ಳಿ ಎಂದು ಪ್ರಾಂಶುಪಾಲರಿಗೆ ಬರೆದು ಕೊಟ್ಟರು.
ಅಂದು ನನಗಾದ ಪುಳಕ, ಆನಂದ ಅಷ್ಟಿಷ್ಟಲ್ಲ. ಬುದ್ದಿಯವರು ನಿಜವಾಗಿಯೂ ಮಾತೃ ಸ್ವರೂಪಿಯಾಗಿದ್ದರು. ಅವರೆಂದಗೂ ಯಾವ ವಿದ್ಯಾರ್ಥಿಯನ್ನು ‘ನಿನ್ನ ಜಾತಿ ಯಾವುದು?’ ಎಂದು ಕೇಳಿದವರಲ್ಲ. ವೀರಶೈವ ವಿದ್ಯಾರ್ಥಿಗಳು ಮತ್ತು ಇತರೆ ಜಾತಿಯ ವಿದ್ಯಾರ್ಥಿಗಳ ಮಧ್ಯೆ ಎಂದಿಗೂ ಕಿಂಚಿತ್ ತಾರತಮ್ಯ ಮಾಡಿದವರಲ್ಲ. ಅವರು ನನ್ನಂತಹ ಲಕ್ಷಾಂತರ ಮಂದಿಗೆ ಸಾಕ್ಷಾತ್ ದೇವರಾಗಿದ್ದಾರೆ.
ಇಂದಿನ ಸ್ವಾಮಿಗಳಂತೆ ಅವರು ಎಂದಿಗೂ ಮರೆಯ ಕೋಣೆಯಲ್ಲಿ ಕುಳಿತವರಲ್ಲ. ಸಿದ್ದಗಂಗೆಯ ಮುಖ್ಯರಸ್ತೆಗೆ ಬುದ್ದಿಯವರು ಕುಳಿತಿರುವ ದೃಶ್ಯ ನಡೆದಾಡುವ ಎಲ್ಲರಿಗೂ ಕಾಣುತ್ತಿತ್ತು. ಸಾರ್ವಜನಿಕವಾಗಿ ಯಾರೂ ಬೇಕಾದರೂ ಅವರ ದರ್ಶನ ಪಡೆಯಬಹುದಾಗಿತ್ತು. ಈಗಿನ ಕೆಲವು ಸ್ವಾಮಿಗಳು ನೋಡಲು ಬೇರೆಯವರ ಶಿಫಾರಸು ಬುದ್ದಿಯವರನ್ನು ನೋಡಲು ಬೇಕಾಗಿರಲಿಲ್ಲ. ಅವರಿಗೆ ಬಡವ-ಬಲ್ಲಿದ ಎಂಬ ಬೇದಭಾವವೇ ಇರಲಿಲ್ಲ. ಬುದ್ದಿಯವರು ಯಾರನ್ನೂ ಎಂದಿಗೂ ಕತ್ತೆತ್ತಿ ನೋಡಿದವರಲ್ಲ. ಮಠದ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಮಗುವಿನಂತೆ ಕಾಪಾಡಿಕೊಂಡು ಬಂದ ಮಹಾ ತಪಸ್ವಿಯವರು. ಯಾಕೋ ಮತ್ತೆ ಮತ್ತೆ ಬುದ್ದಿಯವರ ನೆನಪು ಕಾಡುತ್ತಿದೆ….

-ಡಾ.ಅಮ್ಮಸಂದ್ರ ಸುರೇಶ್, ಸಾಹಿತಿ, ಮೈಸೂರು
*****                                                    (ರೇಖಾಚಿತ್ರ ಕೃಪೆ:  ಶ್ರೀ ಟಿ. ಎಫ್ ಹಾದಿಮನಿ)