ಎಲಿವೇಟ್ ಕಲ್ಯಾಣ ಕರ್ನಾಟಕ ಯುವ ಜನರ ಆಕರ್ಷಕ ಯೋಜನೆ -ಡಾ. ಸಂಧ್ಯಾ ಅನ್ವೇಕರ್

ಹೊಸಪೇಟೆ, ಸೆ.6: ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆ ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸುತ್ತದೆ ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಅನ್ವೇಕರ್ ತಿಳಿಸಿದರು.
ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ವಿಭಾಗದ ಉದ್ಯಮಶೀಲತೆ ಮತ್ತು ಆವಿಷ್ಕಾರ ಕುರಿತ ಒಂದು ದಿನದ ‘ಬೂಟ್ ಕ್ಯಾಂಪ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯೋಜನೆ ಈ ಭಾಗದ ಅಭಿವೃದ್ಧಿಗೆ ಉತ್ತೇಜಕವಾಗಲಿದೆ.
ಬೆಂಗಳೂರು ಹೊರತು ಪಡಿಸಿ ರಾಜ್ಯದ ಹಿಂದುಳಿದ ಪ್ರದೇಶಗಳಿಗೂ ಉದ್ಯಮಶೀಲತೆಯನ್ನು ವಿಸ್ತರಿಸುವಲ್ಲಿ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಉದ್ಯಮಶೀಲತಾ ಪ್ರೇರಣಾ ಸರಣಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಗುರುತಿಸುವ ಹಾಗೂ ಅವರನ್ನು ಉದ್ಯಮಶೀಲತೆಯ ಬಗ್ಗೆ ಪ್ರೇರಣೆ ನೀಡಿ ಹೊಸ ಸ್ಟಾರ್ಟ್ ಅಪ್ ಆರಂಭಿಸುವಲ್ಲಿ ಉತ್ತೇಜನ ಹಾಗೂ. ಆರ್ಥಿಕ ಸೌಲಭ್ಯ ಪಡೆಯಬಹುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಮಾತನಾಡಿ ಇಂತಹ ಸರ್ಕಾರದ ಯೋಜನೆಗಳು ಬಡ ವಿದ್ಯಾರ್ಥಿಗಳಿಗೆ ಸ್ಟಾರ್ಟ್ ಅಪ್ ಆರಂಭಿಸಲು ಆರ್ಥಿಕವಾಗಿ ಪೂರಕವಾಗಲಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಎಸ್. ಎಂ. ಶಶಿಧರ್ ಮಾತನಾಡಿ ಜಿಲ್ಲಾ ಇನ್ನೋವೆಟಿವ್ ಹಬ್ ನ್ನು ಪಿ.ಡಿ. ಐ. ಟಿ ಯಲ್ಲಿ ಸ್ಥಾಪಿಸಲಾಗುತ್ತಿದೆ. ನಾವೀನ್ಯತೆ ಹಾಗೂ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಹಾಗೂ ವಿನೂತನ ಹತ್ತು ಪ್ರಾಜೆಕ್ಟ್ ಗಳಿಗೆ ತಲಾ ಮೂರು ಲಕ್ಷ ಮೊತ್ತದ ಆರ್ಥಿಕ ಅನುದಾನವನ್ನು ಮುಂದಿನ ಮೂರು ವರ್ಷಗಳಲ್ಲಿ ಕೊಡಲಾಗುವುದು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೆಡಿಇಎಂನ ಸಂಪನ್ಮೂಲ ವ್ಯಕ್ತಿಗಳಾದ ಗೌರವ್ ಕೆ ಪಂಜಾಬಿಯವರು ತಾಂತ್ರಿಕತೆ, ಆವಿಷ್ಕಾರ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸ್ಟಾರ್ಟ್ ಅಪ್ ಪ್ರೋಗ್ರಾಮ್ ಗಳ ಬಗ್ಗೆ ಮಾಹಿತಿ ನೀಡಿದರು. ಸ್ಟಾರ್ಟ್ ಅಪ್ ಕರ್ನಾಟಕ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಬಿ ಎನ್, ಸಂಪನ್ಮೂಲ ವ್ಯಕ್ತಿಗಳಾದ ಸುಧಾಕರ್ ಸ್ಯಾಮ್ಯುಯೆಲ್ ಹಾಗೂ ಡಾ. ಬಾಲಮುರುಗನ್, ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಿಬಿರದ ಕಿಟ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಚಾಲಕ ಪ್ರೊ. ಎಸ್ ಪ್ರಕಾಶ್ ಸ್ವಾಗತಿಸಿದರು. ಪ್ರೊ. ಸುಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ರಶ್ಮಿ ಪ್ರಾರ್ಥಿಸಿದರು. ಶಿಬಿರದಲ್ಲಿ ಜಿಲ್ಲೆಯ ೧೫೦ಕ್ಕೂ ಹೆಚ್ಚು ತಾಂತ್ರಿಕ ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮ ರಾಜ್ಯ ಸರ್ಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಜರುಗಿತು.
*****