ರಕ್ತದಾನ ಜೀವ ಸಂಜೀವಿನಿ -ಮಾನವೀಯ ವೀರನಾಯಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬ್ಲಡ್ ದೇವಣ್ಣ

ಬಳ್ಳಾರಿ, ಸೆ.10 : ರಕ್ತದಾನ ಜೀವದಾನವಾಗಿದ್ದು, ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ನೀಡಿ ಅವರ ಪ್ರಾಣವನ್ನು ಉಳಿಸಬೇಕೆಂದು ಮಾನವೀಯ ವೀರನಾಯಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಕ್ತದಾನಿ ಬ್ಲಡ್ ದೇವಣ್ಣ ಅವರು ತಿಳಿಸಿದರು.


ಜೆಸಿಐ ಬಳ್ಳಾರಿ ಕೋಟೆ, ನಗರದ ಸ್ಪಂದನ ರಕ್ತನಿಧಿ ಕೇಂದ್ರ, ಹಾಗೂ ಅಭಯ್ ಫೌಂಡೇಶನ್ ಇವರ ಸಹಯೋಗದಲ್ಲಿ ನಗರದ ಶ್ರೀ ಸತ್ಯಂ ಶಿಕ್ಷಣ (ಬಿಇಡಿ)ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
೧೮ ರಿಂದ ೬೦ ವರ್ಷದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ತಾವು ಇಲ್ಲಿಯವರೆಗೆ ೧೦೪ ಬಾರಿ ರಕ್ತದಾನ ಮಾಡಿದ್ದು, ೯೦೦ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದೇನೆ ಎಂದು ತಮ್ಮ ರಕ್ತದಾನದ ಪಯಣದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ದೇವಣ್ಣ ಹಂಚಿಕೊಂಡರು.


ಸತ್ಯಂ ಶಿಕ್ಷಣ ಸಂಸ್ಥೆಯ ಹಿರಿಯ ಉಪನ್ಯಾಸಕ ಜಯದೇವಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಮೂಲ್ಯವಾದ ಜೀವನ ಉಳಿಸಲು ಯುವಕರು ರಕ್ತದಾನ ಮಾಡಬೇಕೆಂಬ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು.
‘ರಕ್ತದಾನ ಜೀವದಾನ’ ವಿಷಯದ ಕುರಿತು ಉಪನ್ಯಾಸ ನೀಡಿದ
ಹಿರಿಯ ಉಪನ್ಯಾಸಕ ಆಲಂಬಾಷಾ ಅವರು,
ಸಮಾಜದಲ್ಲಿ ರಕ್ತದಾನದ ಬಗ್ಗೆ ಅನೇಕ ಮೌಢ್ಯಗಳಿವೆ ಅವೆಲ್ಲಾ ಸುಳ್ಳು. ರಕ್ತದಾನ ಮಾಡಿದರೆ ಹೃದಯ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಯಾವುದೇ ರೋಗಗಳು ಬರದೆ ಆರೋಗ್ಯವಂತನಾಗಿರಲು ಸಹಾಯಕವಾಗಿದೆ ಎಂದು ತಿಳಿಸಿದರು.
ಜೆಸಿಐ ಬಳ್ಳಾರಿ ಕೋಟೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸಹಾಯಕ ಪ್ರಾಧ್ಯಾಪಕ ಜೆಸಿ ಡಾ.ತಿಪ್ಪೇರುದ್ರ ಮಾತನಾಡಿ ತಮ್ಮ ಸಂಸ್ಥೆ ಕೌಶಲ್ಯ ತರಬೇತಿ ಶಿಬಿರಗಳು, ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿಯಾಗಿದೆ ಎಂದು ಮಾಹಿತಿ‌ ನೀಡಿದರು.


ಸತ್ಯಂ ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಅಶ್ವ ರಾಮಾಂಜನೇಯ(ರಾಮು) ಅವರು ರಕ್ತದಾನ‌ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು., ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಿ.ಅನ್ನಪೂರ್ಣ, ಸ್ಪಂದನ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ಪಾಟೀಲ್, ಪತ್ರಕರ್ತ ಎನ್.ವೀರಭದ್ರಗೌಡ, ಅಭಯ್ ಫೌಂಡೇಶನ್ ಅಧ್ಯಕ್ಷ ರಾಮಕೃಷ್ಣ ರೇಣಿಗುಟ್ಲ ಸೇರಿದಂತೆ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


ರಕ್ತದಾನ ಶಿಬಿರದಲ್ಲಿ ೪೨ ಜನ ರಕ್ತದಾನ ಮಾಡಿದರು. ಹಾಗೂ ೧೨೮ ಜನ ರಕ್ತ ತಪಾಸಣೆ ಮಾಡಿಸಿಕೊಂಡರು.
*****