ಜನಪದ ಕಲಾವಿದರು ಮನುಷ್ಯರು…! ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಜನಪದ ಕಲಾವಿದರಿಗೆ ಶೋಷಣೆ, ತಾರತಮ್ಯ ನಿಲ್ಲಿಸಿ! ಲೇಖನ-ಡಾ. ಅಶ್ವರಾಮು, ಹಳೇ ದರೋಜಿ, ಬಳ್ಳಾರಿ ಜಿಲ್ಲೆ

ಕಳೆದ ಹಲವು ವರ್ಷಗಳಿಂದ ತಮ್ಮ ಪೋಷಕರ ಕಲಾ ತಂಡಗಳ ಜತೆ ಮೈಸೂರು ದಸರಾದಲ್ಲಿ ಭಾಗವಹಿಸಿ ಕಹಿ ಅನುಭವಗಳನ್ನು ಕಂಡಿರುವ ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಸದಸ್ಯರೂ ಆಗಿರುವ ಜಾನಪದ ಸಂಘಟಕ, ಸಂಶೋಧಕ ಡಾ. ಅಶ್ವರಾಮು ಜನಪದ ಕಲಾವಿದರು ಅನುಭವಿಸುವ ಸಂಕಟಗಳನ್ನು ಅಕ್ಷರಕ್ಕಿಳಿಸಿದ್ದಾರೆ. ಸಂಬಂಧಿಸಿದ ಮೈಸೂರು ದಸರಾ ಜವಾಬ್ದಾರಿ ಹೊತ್ತಿರುವ ಹಿರಿಯ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಈ‌ ಬಾರಿಯಾದರೂ ಜನಪದ ಕಲಾವಿದರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲಿ.
-ಸಂಪಾದಕರು👇

ನಮ್ಮ ನಾಡಿನ ಸಾಂಸ್ಕೃತಿಕ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ. ನಮ್ಮ ರಾಜ್ಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಈ ದಸರಾ ಹಬ್ಬವು ಪ್ರಮುಖ ಕಾರಣವಾಗುತ್ತದೆ. ಈ ದಸರಾ ಹಬ್ಬದ ಯಶಸ್ವಿಗೆ ಪ್ರಮುಖ ಕಾರಣಕರ್ತರೆಂದರೆ ಒಂದು ಗಜಪಡೆ ಇನ್ನೊಂದು ಜಾನಪದ ಕಲಾತಂಡಗಳು. ಎಷ್ಟು ವಿಚಿತ್ರ ಎಂದರೆ ಈ ಗಜರಾಜ ಎನಿಸಿಕೊಂಡಿರುವ ಪ್ರಾಣಿಗಳಿಗೆ ಸಿಗುವ ಕನಿಷ್ಟ ಕಾಳಜಿ ಮತ್ತು ಸೌಲಭ್ಯವು ಈ ಜನಪದ ಕಲಾವಿದರಿಗೆ ಸಿಗುತ್ತಿಲ್ಲ. ಕಾಡಲ್ಲಿ ವಾಸಮಾಡುವ ಆನೆ ಇತರೆ ಪ್ರಾಣಿಗಳಿಗೆ ದಸರಾಹಬ್ಬ ಒಂದು ತಿಂಗಳು ಮುಂಚಿತವಾಗಿ ಅರಮನೆಗೆ ಕರೆತಂದು ಅವುಗಳಿಗೆ ಲಾಲನೆ, ಪೋಷಣೆ, ತರಬೇತಿ ಇತ್ಯಾದಿ ಸೌಕರ್ಯಗಳನ್ನು ನೀಡಿ ಅಷ್ಟೇ ಗೌರವಯುತವಾಗಿ ತಮ್ಮ ಮೂಲಸ್ಥಳಕ್ಕೆ ಕಳಿಸಿಕೊಡುವ ವ್ಯವಸ್ಥೆ ಆಯೋಜಕರು ಮಾಡುತ್ತಾರೆ. ಆದರೆ ಈ ಜನಪದ ಕಲಾವಿದರಿಗೆ ದಸರಾ ಹಬ್ಬ ವಿಜಯದಶಮಿ ಇನ್ನೂ ನಾಲ್ಕೆದು ದಿನ ಇರುವಾಗ ಕಲಾವಿದರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡುತ್ತಾರೆ. ಆನಂತರ ಆಹ್ವಾನಪತ್ರಗಳನ್ನು ತಲುಪಿಸುತ್ತಾರೆ. ಆ ಪತ್ರಗಳು ಕಲಾವಿದರು ದಸರಾ ಹಬ್ಬ ಮುಗಿಸಿಕೊಂಡು ಬಂದ ಮೇಲೆ ಅವರ ಕೈಗೆ ಸೇರುತ್ತವೆ.
ಮೆರವಣಿಯಲ್ಲಿ ಭಾಗವಹಿಸುವ ಜನಪದ ಕಲಾವಿದರನ್ನು ನಂಜರಾಜ ಬಹುದ್ದೂರ್ ಛತ್ರದಲ್ಲಿ ಪ್ರಾಣಿಗಳಂತೆ ಒಂದುಕಡೆ ಕೂಡಿಹಾಕಲಾಗುತ್ತದೆ. ಬಂದಿರುವಂತಹ ಕಲಾವಿದರು ಬಯಲಲ್ಲಿ ಮಣ್ಣಿನಲ್ಲಿ ಮಲಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಛತ್ರದಲ್ಲಿ ಇರುವ ಅಲ್ಪ ಶೌಚಾಲಯ ವ್ಯವಸ್ಥೆ, ಬಾತ್‌ರೂಮ್ ವ್ಯವಸ್ಥೆಯು ಸಾವಿರಾರು ಕಲಾವಿದರಿಗೆ ಸಾಲದೇ ಬಹಿರ್ದೆಸೆಗೆ ಬಯಲಿಗೆ ಹೋಗಬೇಕಾಗಿದೆ. ವೇದಿಕೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಸಿಗುವ ಐಷಾರಾಮಿ ಲಾಡ್ಜ್ ಮತ್ತು ಪ್ರತ್ಯೇಕ ರೂಮ್‌ಗಳ ವ್ಯವಸ್ಥೆ, ಅವರಿಗೆ ಕಾರು ಬಾರು ಮತ್ತು ಒಳ್ಳೇಯ ಹೋಟೆಲ್‌ನಲ್ಲಿ ಊಟದ ವ್ಯವಸ್ಥೆ ಮತ್ತು ಕೇವಲ ೧೦, ೧೫, ೨೫ ನಿಮಿಷಗಳ ಪ್ರದರ್ಶನಕ್ಕೆ ಅತಿಹೆಚ್ಚು ಗೌರವ ಸಂಭಾವನೆ ಸಿಗುವಷ್ಟು ಈ ಜನಪದ ಕಲಾವಿದರಿಗೆ ಸಿಗುವುದಿಲ್ಲ. ಈ ಜನಪದ ಕಲಾವಿದರಿಗೆ ಬೆಳಿಗ್ಗೆ ಉಪಹಾರ ನೀಡುವ ಬದಲು ನೇರವಾಗಿ ಊಟ ಕೊಟ್ಟು ಕಲಾವಿದರನ್ನು ತಮ್ಮ ವೇಷಭೂಷಣಗಳೊಂದಿಗೆ ಅರಮನೆಗೆ ಲಾರಿ ಬಸ್ಸುಗಳಲ್ಲಿ ದನಕರುಗಳ ಪ್ರಾಣಿಗಳಂತೆ ಅರಮನೆಯ ಜಯಮಾರ್ತಾಂಡ ಗೇಟ್‌ನಲ್ಲಿ ನಿಲ್ಲಿಸಿ, ಸಾರ್ವಜನಿಕರು ಮತ್ತು ಕಲಾವಿದರಿಗೂ ವ್ಯತ್ಯಾಸ ವಿಲ್ಲದೇ ಒಂದೇ ಪ್ರವೇಶ ದ್ವಾರದಲ್ಲಿ ಕಲ್ಪಿಸಿದ್ದು ಕಲಾವಿದರು ಹಾಕಿಕೊಂಡಿರುವ ವೇಷಭೂಷಣಗಳು ಅಳಸಿಕೊಂಡು ಆ ಕ್ಕಿಕಿರಿದ ಜನಜಂಗುಳಿಯಲ್ಲಿ ಹರಸಾಹಸ ಪಟ್ಟು ಒಳಗೆ ಹೋಗಬೇಕಾಗಿದೆ. ಅರಮನೆಗೆ ಕರೆತಂದ ಕಲಾವಿದರಿಗೆ ಗಂಟೆಗಟ್ಟಲೇ ಕಾಯಲು ಒಂದು ಕಡೆ ಕೂರಲು ಆಸನ ವ್ಯವಸ್ಥೆ ಮತ್ತು ಷಾಮಿಯಾನ ವ್ಯವಸ್ಥೆ ಇಲ್ಲದೇ ರಣಬಿಸಿಲಿನಲ್ಲಿ ನಿಲ್ಲಬೇಕಾಗು್ತದೆ. ಕೆಲವು ಕಲಾವಿದರು ತಾವು ಧರಿಸಿದ ವೇಷಭೂಷಣಗಳು ಮತ್ತು ಆಯುಧಗಳನ್ನೇ ಅರಮನೆಯ ಮುಂದೆ ಗುಡಾರ ಗುಡಿಸಲು ಹಾಕಿಕೊಂಡು ತಮ್ಮ ನಿಟ್ಟುಸಿರು ಬಿಡುತ್ತಾರೆ.. ಅರಮೆನೆ ಆವರಣದಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ, ಶೌಚಲಯ ವ್ಯವಸ್ಥೆ ಇಲ್ಲದೆ ಕಲಾವಿದರು ಅನೇಕ ಸಮಸ್ಯೆಗಳೊಂದಿಗೆ ಪರದಾಡುತ್ತಾರೆ. ಕೆಲವರು ಈ ವ್ಯವಸ್ಥೆಯ ವಿರುದ್ಧ ಕಿರುಚಾಡಿದರು ಅದಕ್ಕೆ ಸಾಕ್ಷಿಯಂತೆ ಕೆಲವು ಪೋಲಿಸರು ಕೂಡ ಬೇಸರವನ್ನು ವ್ಯಕ್ತಪಡಿಸಿದರು. ಸಮಸ್ತ ಜನಪದ ಕಲಾವಿದರನ್ನು ಪ್ರಾಣಿಗಳಿಗಿಂತ ಕಡೆಯಾಗಿ, ಹೀನಾಯವಾಗಿ ಕಾಣಲಾಗುತ್ತದೆ. ಇವರನ್ನು ಶಿಷ್ಟರಂತೆ ಮನುಷ್ಯರು, ಕಲಾವಿದರು ಎಂದು ಭಾವಿಸದೇ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ.
ಸಮಸ್ಯೆಗಳು ನೂರಾರು ಇದ್ದರೂ ಹಾಗೇಯೇ ಪೋಲಿಸರ ಆದೇಶದೊಂದಿಗೆ ಮೇರವಣಿಗೆಯಲ್ಲಿ ಭಾಗವಹಿಸಿ ಸುಮಾರು ೫ ಕಿಮೀ ದೂರದವರೆಗೆ ಸುಮಾರು ಮೂರು ತಾಸು ಬರಿಗಾಲಿನಲ್ಲಿ ನಡೆಯುತ್ತಾ ಕಲಾಪ್ರದರ್ಶನ ನೀಡುತ್ತಾ ಹೋಗಬೇಕಿದೆ. ದಾರಿಯ ಮಧ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕಲಾವಿದರಿಗೆ ಕುಡಿಯಲು ನೀರು, ಮತ್ತು ಮಜ್ಜಿಗೆ ಇತರೆ ಜ್ಯೂಸ್ ನೀಡುತ್ತಿರುವುದರಿಂದ ಕಲಾವಿದರು ದಣಿವು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇಲ್ಲದಿದ್ದರೆ ತುಂಬಾ ಕಷ್ಟಾಗುತ್ತಿತ್ತು. ಆಯೋಜಕರು ಕಲಾವಿದರಿಗೆ ಮೆರವಣಿಗೆಯಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಕೂಡ ಮಾಡಲಿಲ್ಲ ಎಂದು ಅನೇಕ ಜನಪದ ಕಲಾವಿದರು ಹಿಂದಿನ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಮೆರವಣಿಗೆ ಬನ್ನಿಮಂಟಪಕ್ಕೆ ಸಾಗಿದ ನಂತರ ಕಲಾವಿದರ ಪರಿಸ್ಥಿತಿ ಇನ್ನೂ ಅತ್ಯಂತ ಹೀನಾಯವಾಗಿರುವುದು ಕಂಡುಬರುವುದು. ಬಟ್ಟೆ ಬದಲಿಸಲು, ಮೇಕಪ್ ಕಳಚಿಕೊಳ್ಳಲು ಒಂದು ವಿಶ್ರಾಂತಿ ಕೊಠಡಿ ವ್ಯವಸ್ಥೆ ಇಲ್ಲದೆ ನಡು ರಸ್ತೆಯ ಬೀದಿಯಲ್ಲಿಯೇ ತಮ್ಮ ಬಟ್ಟೆಗಳನ್ನು ಬದಲಿಸಿಕೊಂಡು ವಿಶ್ರಾಂತಿ ಪಡೆಯಬೇಕಿದೆ. ಆಯೋಜಕರು ಸ್ತಬ್ಧಚಿತ್ರಗಳಿಗೆ ನಿಲುಗಡೆಗೆ ಸ್ಥಳಾವಾಕಾಶ ಕಲ್ಪಿಸಿದ್ದಾರೆ. ಆನೆ, ಕುದರೆ ಇತರೆ ಪ್ರಾಣಿಗಳು ಬನ್ನಿಮಂಟಪ ತಲುಪಿದ ತಕ್ಷಣ ಅವುಗಳನ್ನು ಅರಮನೆಗೆ ಸಾಗಿಸಲು ಅತ್ಯಂತ ಮುತುವರ್ಜಿವಹಿಸಿಕೊಂಡು ಸಾಗಿಸುತ್ತಾರೆ. ಆದರೆ ಈ ಜನಪದ ಕಲಾವಿದರನ್ನು ಪ್ರಾಣಿಗಳಿಗಿಂತ ಕೀಳಾಗಿ ಬಿಟ್ಟಿದ್ದಾರೆ. ಕಲಾವಿದರಿಗೆ ತಂಗಲು ವ್ಯವಸ್ಥೆ ಮಾಡಿದ ಸ್ಥಳಕ್ಕೆ ಮತುವರ್ಜಿವಹಿಸಿಕೊಂಡು ಕರೆದುಕೊಂಡು ಹೋಗಲು ವ್ಯವಸ್ಥೆ ಇಲ್ಲದೇ ಮತ್ತೆ ಸುಮಾರು ಐದಾರು ಕಿಲೋಮೀಟರ್ ನಡೆದುಕೊಂಡು ತಮ್ಮ ವೇಷಭೂಷಣಗಳನ್ನು ಹೊತ್ತುಕೊಂಡು ಹೋಗಬೇಕಿದೆ. ಒಂದುವೇಳೆ ಆಟೋದಲ್ಲಿ ಹೋಗಬೇಕೆಂದರೆ ೫೦೦ ಅಥವಾ ೬೦೦ ರೂಪಾಯಿ ಕೇಳುತ್ತಾರೆ. ಅಷ್ಟೂ ಹಣ ಕೊಟ್ಟು ಹೋಗಲು ಅವರ ಬಳಿ ಶಕ್ತಿ ಇಲ್ಲ. ಆಯೋಜಕರು ಕೊಡುವ ಅಲ್ಪ ಸಂಭಾವನೆಯಲ್ಲಿ ಅವರು ಹೋಗುವ ಹಳ್ಳಿಗಳಿಗೆ ಸಾಲುವುದಿಲ್ಲ. ದಸರಾ ಮೆರವಣಿಯಲ್ಲಿ ಭಾಗವಹಿಸಲು ೪ ದಿನಗಳು ಕಳೆಯಬೇಕಾಗಿದೆ. ಉದಾ: ೪ ಮತ್ತು ೫.೨೦೨೨ ರಂದು ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದರೆ ೩ನೇ ತಾರಿಕು ರಾತ್ರಿ ಮನೆಯಿಂದ ಬಿಟ್ಟರೆ ೪ಕ್ಕೆ ಬೆಳಿಗೆ ಮೈಸೂರಿನ ಛತ್ರಕ್ಕೆ ತಲುಪುತ್ತಾರೆ. ೫ಕ್ಕೆ ವಿಜಯ ದಶಮಿ ಮೆರವಣಿಗೆಯಲ್ಲಿ ಭಾಗವಹಿಸಿ ಅರಮನೆಯಿಂದ ಬನ್ನಿಮಂಟಪಕ್ಕೆ ಸಾಗಿ ಛತ್ರಕ್ಕೆ ಬರುವಷ್ಟೊರಳಗೆ ರಾತ್ರಿ ೧೦ ಅಥವಾ ೧೧ ಗಂಟೆಗೆ ಆಗುತ್ತದೆ. ಕಲಾವಿದರು ಮನೆಗೆ ತೆರಳಬೇಕಾದರೆ ೬ನೇ ತಾರಿಕು ಬೆಳಿಗ್ಗೆ ಬಿಟ್ಟರೆ ಮನೆ ಸೇರೊವಷ್ಟರೊಳಗೆ ರಾತ್ರಿಯಾಗುತ್ತದೆ. ಒಟ್ಟು ನಾಲ್ಕು ದಿನಗಳು ಕಳೆಯಬೇಕಾಗಿದೆ ಆ ನಾಲ್ಕು ದಿನಕ್ಕೆ ಒಬ್ಬ ಕಲಾವಿದನಿಗೆ ಕೇವಲ ೧೫೦೦ ರೂಪಾಯಿ ಗೌರವ ಸಂಭಾವನೆ ನೀಡಿದರೆ ಎಲ್ಲಿ ಉಳಿಯುತ್ತದೆ. ಪ್ರಯಾಣ ಭತ್ಯೆಯನ್ನು ಕೆ ಎಸ್ ಆರ್ ಟಿ ಸಿ ಬಸು ಪ್ರಯಾಣ ದರವನ್ನು ನೀಡಿದರೆ ಸಮೂಹ ನೃತ್ಯಗಳು ಹೊಂದಿರುವ ವೇಷಭೂಷಣಗಳು, ಸಂಗೀತದ ವಾದ್ಯಗಳು ಹೊಂದಿರುವ ಬೃಹತ್ ಸರಕು ಹೊಂದಿರುವ ಕಲಾತಂಡಗಳಿಗೆ ಬಸ್ಸಲ್ಲಿ ಪ್ರಯಾಣಿಸಲು ಸಾಧ್ಯವಿದೆಯೇ?, ಅದಕ್ಕಾಗಿ ಖಾಸಗಿ ವಾಹನಗಳನ್ನು ತರಬೇಕಾದ ಅನಿವಾರ್ಯತೆ ಹೊಂದಿರುತ್ತದೆ. ಅದಕ್ಕೆ ವಾಹನದ ಬಾಡಿಗೆ, ಚಾಲಕನ ಐದು ದಿನದ ಬತ್ತ ಮಧ್ಯದಲ್ಲಿ ಟೋಲ್ಗೇಟ್‌ಗಳ ಶುಲ್ಕ ಭರಿಸುವಲ್ಲಿ ಕಲಾವಿದ ನೊಂದು ಹೋಗಿರುತ್ತಾನೆ. ಕಲಾವಿದರು ಮನೆಯ ಕುಟುಂಬ, ಮಕ್ಕಳು, ಬದುಕು, ಕೆಲಸ ಬಿಟ್ಟುಬಂದು ಕೇವಲ ಒಂದು ಸಾವಿರ ಐದುನೂರು ರೂಪಾಯಿಯಲ್ಲಿ ಹೇಗೆ ಜೀವನ ಮಾಡುತ್ತಾರೆ ನೀವೇ ಹೇಳಿ. ದಯವಿಟ್ಟು ಜನಪದ ಕಲಾವಿದರೂ ಕೂಡ ನಿಮ್ಮ ಹಾಗೆ ಮನುಷ್ಯರು ಎಂದು ಭಾವಿಸಿ ಸೂಕ್ತ ವ್ಯವಸ್ಥೆ ಮತ್ತು ಗೌರವ ಸಂಭಾವನೆ ಒದಗಿಸಿ ಮುತುವರ್ಜಿಸಿ ವಹಿಸಿ ಕಳಿಸಿಕೊಡಬೇಕಾದ ಜವಾಬ್ದಾರಿ ಆಯೋಜಕರು ಮಾಡಬೇಕಿದೆ. ಇಲ್ಲವಾದರೆ ಕಲಾವಿದರನ್ನು ಇಂತ ಕಾರ್ಯಕ್ರಮಕ್ಕೆ ಕರೆತಂದು ಅವಮಾನ ಮಾಡಬೇಡಿ. ಬೀದಿದೀಪ ಅಲಂಕಾರಕ್ಕಾಗಿ ಕೋಟಿಗಟ್ಟಲೇ ಹಣವನ್ನು ವ್ಯಯ ಮಾಡುವಷ್ಟು ಜನಪದ ಕಲಾವಿದರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಸರ್ಕಾರ ಬಡವ ವಾಗುತ್ತಾ. ಈ ನಾಡಿನ ಸಂಸ್ಕೃತಿ, ಕಲೆ, ಕಲಾವಿದ ಇಲ್ಲದಿದ್ದರೆ ನಾಡೇ ನಶ್ವರ… ಕಲಾವಿದರಿಗೆ ತಾರತಮ್ಯ ಮಾಡಬೇಡಿ. ಶಿಷ್ಟ ಅಥವಾ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡುವ ಕಲಾವಿದರಿಗಿಂತ ಬೀದಿಯಲ್ಲಿ ಕಲಾಪ್ರದರ್ಶನ ನೀಡುವ ಪ್ರತಿಯೊಬ್ಬ ಕಲಾವಿದರ ಶ್ರಮ ಮತ್ತು ಪರಿಣಾಮ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ದಯವಿಟ್ಟು ವೇದಿಕೆಯ ಮೇಲೆ ಪ್ರದರ್ಶಿಸುವ ಕಲಾವಿದರಿಗಿಂತ ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾವಿದರಿಗೆ ಹೆಚ್ಚು ಮನ್ನಣೆ ಮತ್ತು ಸೂಕ್ತ ಗೌರವ ಸಂಭಾವನೆ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿ ಗೌರವಿಸಬೇಕಿದೆ.


-ಡಾ. ಅಶ್ವ ರಾಮು, ಜಾನಪದ&ಕಲಾ ಸಂಘಟಕರು,
ಸದಸ್ಯರು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ (ರಿ)
ಹಳೇ ದರೋಜಿ
*****