ನಾನೊಂದು ಕವನ ಬರೆದೆ
ನಾನೊಂದು ಕವನ ಬರೆದೆ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಟೇಪು ಹಚ್ಚಿ
ಪಕ್ಕದಲ್ಲೊಬ್ಬ ದಲಿತ ಸೋದರ ಸತ್ತಿದ್ದರೂ
ಕಂಡರು ಕಾಣದಂತೆ ಕಣ್ಣ ಮುಚ್ಚಿ
ನಾನೊಂದು ಕವನ ಬರೆದೆ
ಆಹಾ… ನೋಡು ಅಲ್ಲಿ ಚಂದಿರ
ಇಗೋ ಇದು ಮಂದಿರ
ಆ ನಿನ್ನ ಅಂದ ಈ ನಿನ್ನ ಚಂದ
ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದಕ್ಷರ ಹೇಳಿತು
ಥೂ…ನನ್ನ ಜೋಡ್ ಸಿಕ್ಕಾಕ
ಆ ನಿನ್ನ ಪುಕ್ಕಲುತನಕ್ಕೆ
ನಾನೊಂದು ಕವನ ಬರೆದೆ
ಪ್ರೇಕ್ಷಕರೆದುರು ವಾಚಿಸಿದೆ
ಚಪ್ಪಾಳೆಯ ಸುರಿ ಮಳೆ ಮಧ್ಯೆ
ಪ್ರಶಸ್ತಿಯ ರಾಶಿಯ ಕಂಡೆ
ಮುಚ್ಚಿದ್ದ ದೇಗುಲದ ಬಾಗಿಲು ಹೇಳಿತು
ಅಪಮಾನಿತನಾದರೂ ಶಾಲು ಹೊದೆಸಿಕೊಳ್ಳುತ್ತೀಯಲ್ಲ
ನಾಚಿಕೆಯಾಗಬೇಕು ನಿನ್ನ ಜನ್ಮಕ್ಕೆ
ನಾನೊಂದು ಕವನವ ಬರೆದೆ
ಉಪಮೆ ಛಂದಸ್ಸು ವ್ಯಾಕರಣಗಳ ರಾಶಿ ತುಂಬಿತ್ತು
ವಿಮರ್ಶಕರ ಬೋಪರಾಕ್ ನಡೆದಿತ್ತು
ವ್ಯಾಕರಣದ ಒಂದು ಸಾಲು ಕಿರುಚಿತ್ತು
“ವೀರನಿಗೆ ವಿರುದ್ಧ ಪದ ನೀನು, ಹೇಡಿ ನೀನು”!
ಕವನವ ಮುದುರಿ ಎಸೆದಿದ್ದೆ
-ರಘೋತ್ತಮ ಹೊಬ, ಮೈಸೂರು
*****