ಹುಚ್ಚಪ್ಪ
ಸಣ್ಣದಿರುವಾಗ ಮಗಳು ಯಾವಾಗಲೂ
ತಂದೆಯ ಭುಜಗಳ ಮೇಲೆ ಆಡಿಕೊಳ್ಳುತ್ತಿರುತ್ತಾಳೆ
ಹಣೆಯ ಮೇಲೇರಿ ಮಂಗನಂತೆ ಕೂರುತ್ತಾಳೆ
ಹೊಟ್ಟೆಯ ಮೇಲೆ ಒದೆಯುತ್ತಿರುತ್ತಾಳೆ
ಬೆಳೆ ಬೆಳೆಯುತ್ತಿದ್ದಂತೆ ಎಡವಾಗಿ ಸಾಗಿಹೋಗುತ್ತಾಳೆ
ಅದೆಷ್ಟು ಆಟವಾಡಿದರೂ ಈ ತಂದೆಯ ಕಣ್ಣಲ್ಲಿ
ಅವಳಿನ್ನೂ ಮೊಲದ ಮುದ್ದು ಮರಿಯೇ
ಈ ತಂದೆಯ ಗುಂಡಿಗೆಯಲಿ ಅವಳಿನ್ನೂ
ಮಂಜಿನ ಮುತ್ತುಗಳು ಹೂರಾಶಿಯೇ
ಮಕ್ಕಳಲ್ಲಿ ಮಕ್ಕಳಂತೆ ಹೆಣ್ಣೈಕಳಲ್ಲಿ ಹೆಣ್ಣೈದಳಂತೆ
ಕಾಣುತ್ತಾ
ನನ್ನನ್ನ ಲಕ್ಷಮಂದಿ ಮಕ್ಕಳ ಲಕ್ಷಾಧಿಕಾರಿ ಮಾಡುತ್ತಾಳೆ
ಯಾವ ಶಾಪಿಗಾದರೂ ಹೋಗ್ತೀನಾ
ಅಲ್ಲಿನ ಬೊಂಬೆಗಳೆಲ್ಲಾ… ನನ್ನ ಪುಟಾಣಿಯಂತೆ
ಡ್ಯಾಡಿ ಡ್ಯಾಡಿ ಎಂದು ಕರೆಯುತ್ತಿದ್ದಂತೆ ಇರುತ್ತದೆ
ದಾರಿಯಲ್ಲಿ ಕಾನ್ವೆಂಟು ಮಕ್ಕಳನ್ನು ನೋಡುತ್ತೇನಾ
ಅನೇಕ ರೂಪಗಳಲ್ಲಿ ನನ್ನ ಮಗಳೇ
ಆಡಿಕೊಳ್ಳುತ್ತಿರುವಂತೆ ಇರುತ್ತದೆ
ಯಾವ ಕಾಲೇಜಿನ ಎದುರು ನಿಂತರೂ
ಬಣ್ಣ ಬಣ್ಣದ ಬಟ್ಟೆಗಳಲ್ಲಿ ಚಿಟ್ಟೆಯಂತೆ
ನನ್ನ ಮಗಳೇ ಎಗರುತ್ತಿದ್ದಂತೆಯೇ ಇರುತ್ತದೆ
ಯಾರಿಗೂ ಕಾಣುವುದಿಲ್ಲ ॥ ಆದರೂ
ನನ್ನ ಹಣೆಯ ಮೇಲೆ ಒಂದು ಪುಟ್ಟ ಸಿಂಹಾಸನ
ಅದರ ಮೇಲೆ ನನ್ನ ಪುಟಾಣಿ ಯುವರಾಣಿ
ಈ ಪ್ರಪಂಚದ ತಿರುನಾಳಿನಲ್ಲಿ
ಅವಳನ್ನು ಹಾಗೆಯೇ ಆಯಾಸವಿಲ್ಲದೆ
ತಿರುಗಿಸುತ್ತಿದ್ದಂತೆಯೇ ಇರುತ್ತದೆ
ಅವಳಿಗಿಂದು ಕನ್ನಡಿಯಲ್ಲಿ ತನ್ನ ಬೊಂಬೆ ಬಿಟ್ಟರೆ
ಏನೂ ಹಿಡಿಸದು ಆದರೂ ॥
ಅವಳು ರಾತ್ರಿಯೆಲ್ಲಾ ಬಿದ್ದುಬಿದ್ದು ಓದುತ್ತಿದ್ದರೆ
ನಾನು ಟೀ ಡಿಕಾಷನ್ನಂತೆ ಕುದಿಯುತ್ತಿರುತ್ತೇನೆ
ಅವಳು ಪರೀಕ್ಷೆ ಬರೆಯುತ್ತಿದ್ದರೆ ಆ ಮೂರು ಗಂಟೆ
ರಸ್ತೆ ಮೇಲೆ ವಾಹನಗಳ್ಯಾವುವೂ ಕದಲಬಾರದೆಂದು
ಗದರಿಕೊಳ್ಳುತ್ತಾ ಟ್ರಾಫಿಕ್ ಪೊಲೀಸ್ ಆಗುತ್ತೇನೆ
ಅವಳು ಚಳಿಯಲ್ಲಿ ನಡಗುತ್ತಿದ್ದರೆ
ನಾನು ಹತ್ತಿಕಾಯಿಯಾಗಿ ಒಡೆದು ಹೋಗುತ್ತಿರುತ್ತೇನೆ
ಅವಳು ಜ್ವರದಿಂದ ಕಿಸುರುಕೊಂಡರೆ
ನೂರು ರೆಕ್ಕೆಗಳ ಬೀಸಣಿಗೆಯಾಗಿ ನಾನು ಆಕೆಯಸುತ್ತಾ
ಸಾವಿರ ಪ್ರದರ್ಶನಗಳಾಗಿ ತಿರುಗುತ್ತಿರುತ್ತೇನೆ
ಆಕೆ ಖಾಯಿಲೆಗೊಂಡರೆ ಇಡೀ ವೈದ್ಯ ಶಾಸ್ತ್ರವನ್ನೇ
ತಪ್ಪು ಹಿಡಿಯುತ್ತೇನೆ
ಒಮ್ಮೆ ನಕ್ಕರೆ ಒಂದೊಮ್ಮೆ ನಕ್ಕರೆ ಸಾಕು
ಮೈಯೆಲ್ಲ ಸಾವಿರಾರು ಪಿಯಾನೋಗಳನ್ನು
ಸುತ್ತಿಕೊಂಡು
ಸಜನ ಸಂಗೀತವಾಗಿ ಕರಗಿ ಹೋಗುತ್ತೇನೆ
ಇನ್ನು ಅವಳ ಹುಟ್ಟಿದ ದಿನ ಬಂತೆಂದರೆ
ಆಕಾಶಕ್ಕೆ ಬೆಳಕಾಗಿ ನಾನೇ ನೇತಾಡುತ್ತಿರುತ್ತೇನೆ
ಕೊಂಬೆ ಕೊಂಬೆಗೂ ಚಾಕಲೇಟು ಕೇಕುಗಳನ್ನು ಕಟ್ಟಿ
ಪಕ್ಷಿಗಳಿಗೆ ಫಲಾಹಾರವಾಗಿ ಇಡುತ್ತೇನೆ
ಈಗವಳು ಬೆಳೆದಿದ್ದಾಳಲ್ಲ ತಂದೆಯ ಹೊಟ್ಟೆಯ ಮೇಲೆ
ಆಡಿಕೊಳ್ಳುವುದು ಎಂದೋ ಬಿಟ್ಟಿದ್ದಾಳೆ
ಜೊತೆಗೆ ನನ್ನ ನೋಡಿ ಹುಚ್ಚಪ್ಪ ಎಂದು ನಗುತ್ತಾಳೆ
ಅದೇನೋ ಗೊತ್ತಿಲ್ಲ ಅದೇನೋ ಗೊತ್ತಿಲ್ಲ
ಒಂದು ಕೋತಿಮರಿ ತಾಯಿ ಹೊಟ್ಟೆಯ
ಬಿಗಿದ್ಹಿಡಿದುಕೊಂಡಂತೆ
ಒಂದು ಶೃತಿ ಮಧುರವಾದ ಪ್ರಾಣ ರೇಖೆಯೊಂದು
ನನ್ನ ಹೊಟ್ಟೆಯ ಬಳಸ್ಹಿಡಿದುಕೊಂಡಂತೆ ಇರುತ್ತದೆ
ನನಗೆ ಮಾತ್ರ ಮಗಳೆಂದರೆ ಒಂದೇ ಜನ್ಮದಲ್ಲಿ
ನಾವು ಹೊಂದುವ ಎರಡನೆಯ ಅಮ್ಮ
ಗುಂಡಿಗೆಯ ಶೋಕೇಸಿನಲ್ಲಿ ಎಂದಿಗೂ ಮಗುವಂತೆ
ಕಾಣುವ ಬಂಗಾರು ಬೊಂಬೆ
-ನ. ಗುರುಮೂರ್ತಿ ಜಯಮಂಗಲ, ಮಾಲೂರು
*****