ಇಂದು ಹೆಸರಾಂತ ಸಾಹಿತಿ ಡಾ.ಕುಂ ವೀರಭದ್ರಪ್ಪ ಅವರ 70ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಡಾ.ಕುಂ ವೀ ಅವರ ಪುತ್ರ, ಯುವ ಸಾಹಿತಿ ಪ್ರವರ ಕೊಟ್ಟೂರು ಅವರು ತಮ್ಮ ತಂದೆಯವರ ಕುರಿತು ಬರೆದ ಹೃದಯ ಸ್ಪರ್ಶಿ ‘ಅಪ್ಪನಿಗೆ ಎಪ್ಪತ್ತು’ ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದೆ.
ತಮ್ಮ ಪ್ರತಿಭೆ, ಸಾಧನೆ ಮೂಲಕ ನಾಡಿಗೆ, ವಿಶೇಷವಾಗಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಕುಂವೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು🌺🎂🍀🌹💐
(ಸಂಪಾದಕರು)👇
ಅಪ್ಪನಿಗೆ ಎಪ್ಪತ್ತು
ಏನಾದರೊಂದು ಬರೆಯುತ್ತಲೇ ಹೊಸದೊಂದು ಜಗತ್ತು ಇರುಳ ನಡುವೆ ನಕ್ಷತ್ರಗಳಂತೆ ಹುಟ್ಟಿಬಿಡುತ್ತವೆ ಬೇಸಿಗೆಯ ನಟ್ಟ ನಡುವೆ ಹಡೆವ ಸುಳಿಗಾಳಿಯಂತೆ
ಎಂಥಾ ವಿಲಕ್ಷಣ ಜಗತ್ತು ಅಂತೀರಿ
ಮುಖದ ನೆರಿಗೆಗಳಲ್ಲೇ ಆಯಸ್ಸು ಅಳೆದು,
ಮಾತು ಮಾತಿಗೂ ಸಾಸಿರ ಹಾಡುಗಳು ಸುಳಿದು,
ಕಥೆಯ ಗರ್ಭದಲ್ಲೊಂದು ಕಥೆ
ಅದರಲ್ಲೊಂದು ಮತ್ತೊಂದು ಹೀಗೆ ಅಪರಿಮಿತ
ಹಸಿವೀಲೆ ತುಟಿಯ ಮೇಲೆ ನಗು
ಹೂವಂತೆ ಬಿರಿಯುತ್ತದೆ
ಬರೆಯುತ್ತಾ
ಬಗಲಿಗೊಂದು ಚೀಲ ಇಳಿಬಿಟ್ಟುಕೊಂಡು
ತಾನೇ ಪಾತ್ರವಾಗಿ, ಕಾಲು ದಣಿಯೆ
ಓಡಾಡಿ
ರಕುತದಲೆ ಕೈ ತೊಳೆವವರ ಜೋಡಿ
ಸಾಯಲು ಹೊರಟವರ ಜೋಡಿ
ಮುಕುಳಿಯ ಮೇಲೆ ಚಲ್ಲಾಣವಿಲ್ಲದ ಕಂದಮ್ಮಗಳ ಜೋಡಿ
ರಾಯಲ ಸೀಮೆಯ ಮಚ್ಚು ಲಾಂಗುಗಳ,
ನಾಡ ಪಿಸ್ತೂಲುಗಳ, ಹ್ಯಾಂಡ್ ಗ್ರೇನೇಡುಗಳ ನಡುವೆ
ಚಿಟ್ಟೆ ರೂಪು ಧರಿಸಿ
ಕೊನೆಗೆ ಟೀ ಅಂಗಡಿಯ ಮುಂದೆ
ಜೇಬಿನಲ್ಲೇ ಅನಾಥವಾಗಿ ಬಿದ್ದುಕೊಂಡಿರುವ
ಎರಡು ಹಸಿರು ನೋಟುಗಳ
ಮುರಿಸಿದರೆ ಚಿಲ್ಲರೆಯಾದೀತೆಂಬ
ಯೋಚನೆಯಲ್ಲೇ ಬಿಕ್ಕಳಿಕೆ ಖಾಲಿಯಾಗುತ್ತಾ ತುಂಬಿಕೊಳ್ಳುತ್ತದೆ
ಬರೋಬ್ಬರಿ ಆರು ಚಿಲ್ಲರೆ ಅಡಿ ಮನುಷ್ಯ
ಇಷ್ಟು ಸಣ್ಣ ಪುಸ್ತಕದ ಪುಟಗಳಲ್ಲಿ ಹೊಕ್ಕಿ
ಮಣ್ಣಾದ ಅರಮನೆಗಳ ಹುಡುಕಿ
ಸಾವಿರಾರು ಮೈಲುಗಳ ದಾರಿ ಹಿಡಿದು,
ಕೊನೆಗೆ ಮಂಡ್ರಪ್ಪನ ಎದುರು ಡೊಂಕಾದ ಬೆರಳುಗಳಲ್ಲಿ ಪೆನ್ನು ಪೇಪರ್ರು ಹಿಡಿದು
ನಿನ್ನದೇನು ಕಥೆ ಹೇಳಯ್ಯಾ? ಅಂತ
ಹನ್ನೆರಡು ವರುಷ ಕೂತು ಕೇಳಿದ ಕಥೆಗೆ
ಹದಿನೈದಿಪ್ಪತ್ತು ಕೇಜಿ ತೂಕ ಇಳಿದು ಹೋಗಿದೆ
ತಾನು ಸೃಸ್ಟಿಸಿದ ಪಾತ್ರ
ತನ್ನದೇ ಮಾತು ಕೇಳಲು ಒಲ್ಲೆ ಎಂದಾಗ
ಅಸಾಧ್ಯ ಕೋಪ,
ದೇವರು ಹೊಕ್ಕಿದಂಥಾ ನಾಲಿಗೆ ಪಾತ್ರಗಳದ್ದು
ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುವಾಗ
ಕರಡಿ ಪ್ರೀತಿ ಉಕ್ಕಿಬಿಡುತ್ತದೆ
ಅಂಗೈ ಚಾಚಿ ಅವರ ನೋವುಗಳ ಪಡೆದು
ಮೈಗೆ ಹಚ್ಚೆ ಹುಯ್ಯುವಾಗ,
ಹಸಿ ಗಾಯಗಳ ಕಡ ಪಡೆದು
ಸಣ್ಣಗೆ ಮುಲುಕುವಾಗ
ಗುಡಿಯ ಹೊರಗೆ ಹಸಿವೀಲೆ ಕೂತ ಕತ್ತಲನ,
ಕೊಟ್ರನ, ಠೊಣ್ಣಿಯ ಸಂಕಟಗಳ
ಎದೆಯ ಎಲುಬಿನ ನಡುವೆ ಹೊಯ್ದಾಡುವ
ಈಟೇ ಈಟು ಹೃದಯಕ್ಕೆ
ಕತೆಯ ಮುಲಾಮು ಸವರಿಕೊಳ್ಳುತ್ತಾರೆ
ಅಪ್ಪಚ್ಚಿಯಾದ ಬೆರಳುಗಳಲ್ಲಿ
-ಪ್ರವರ ಕೊಟ್ಟೂರು
*****