ಮೈಸೂರು ರಂಗಪ್ರಿಯರ ಮನಸೂರೆಗೊಂಡ ಬಳ್ಳಾರಿ ಕಲಾವಿದರ `ರಕ್ತರಾತ್ರಿ’

  1. ಮೈಸೂರು, ಅ.2: ವಿಶ್ವ ಖ್ಯಾತಿಯ ಮೈಸೂರು ದಸರಾ ಉತ್ಸವದಲ್ಲಿ ಬಳ್ಳಾರಿಯ ಹಂದ್ಯಾಳು ಶ್ರೀ ಮಹಾದೇವ ತಾತ ಕಲಾ ಸಂಘದ ಕಲಾವಿದರು ಅಭಿನಯಿಸಿದ `ರಕ್ತರಾತ್ರಿ’ ಪೌರಾಣಿಕ ನಾಟಕ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿದೆ.
    ನಗರದ ಪುರಭವನದ ವೇದಿಕೆಯಲ್ಲಿ ಹಂದ್ಯಾಳು ಪುರಷೋತ್ತಮ ಅವರ ನಿರ್ದೇಶನದಲ್ಲಿ ನಡೆದ ಕಂದಗಲ್ಲು ಹನುಮಂತರಾಯರ `ರಕ್ತರಾತ್ರಿ’ ಪೌರಾಣಿಕ ನಾಟಕಕ್ಕೆ ಪ್ರೇಕ್ಷಕ ಸಮೂಹ ಹರ್ಷೋದ್ಘಾರಗಳನ್ನು ವ್ಯಕ್ತಪಡಿಸಿ ಕಲಾವಿದರನ್ನು ಪ್ರೋತ್ಸಾಹಿಸಿದೆ.
    ಸಂಘದ ಅಧ್ಯಕ್ಷ ಹಂದ್ಯಾಳು ಪುರುಷೋತ್ತಮ ಅವರು `ಶಕುನಿ’ಯಾಗಿ, ಹಿರಿಯ ರಂಗಭೂಮಿ ಕಲಾವಿದ ಕೆ.ಎಂ. ಹಾಲಪ್ಪ ಗಾದಿಗನೂರು `ದುರ್ಯೋಧನ’ನಾಗಿ, ವೈ.ಎನ್. ಗೌಡ್ರು `ಅಶ್ವತ್ಥಾಮ’ನಾಗಿ, ಜವಳಗೇರೆ ಬಸವರಾಜಸ್ವಾಮಿ ಗಂಧರ್ವ ಹಾಗು `ಕರ್ಣ’ನಾಗಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಬಳ್ಳಾರಿ ವೀಣಾ `ಭಾನುಮತಿ’ ಹಾಗು ದ್ರೌಪದಿ ಯಾಗಿ, ಇಳಕಲ್ಲಿನ ಉಮಾರಾಣಿ ಮದಹಂಸಿ ಹಾಗು ಅನಂಗಪುಷ್ಪಳ ಪಾತ್ರದಲ್ಲಿ ಹಾಗೂ ಕೂಡ್ಲಿಗಿಯ ರಾಧ ನೃತ್ಯಗಾರ್ತಿ ಯಾಗಿ ಕಲಾರಸಿಕರ ಮನತಣಿಸಿ ನೆರೆದ ಪ್ರೇಕ್ಷಕರ ಗಮನ ಸೆಳೆದರು.
    ಚಂದ್ರಶೇಖರ ದಾವಣಗೆರೆ ತಬಲ, ತಿಪ್ಪೆಸ್ವಾಮಿ ಸೂಲದಹಳ್ಳಿ ಕ್ಯಾಷಿಯೋ, ರಾಮಚಂದ್ರ ಅವರ ಪ್ರಸಾದನ ಪಾತ್ರಧಾರಿಗಳ ಉತ್ಸಾಹಕ್ಕೆ, ಕಲಾರಸಿಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತ್ತು.
    ಒನ್ಸ್ ಮೋರ್-ಒನ್ಸ್ ಮೋರ್: ನಾಟಕ ಪೂರ್ಣಗೊಂಡಾಗ ಪ್ರೇಕ್ಷಕರು `ಒನ್ಸ್ ಮೋರ್, ಮತ್ತೊಮ್ಮೆ ರಕ್ತರಾತ್ರಿ’ ಎಂದು ಕೂಗಿದ್ದು, ಬಳ್ಳಾರಿ ತಂಡದ ಕಲಾವಿದರ ಕಲಾನೈಪುಣ್ಯತೆಯನ್ನು ಸಾಕ್ಷೀಕರಿಸಿತು ಜತೆಗೆ ಎಲ್ಲಾ ರಂಗ ನಟ‌ನಟಿಯರ ಕಣ್ಣುಗಳು ಆನಂದಭಾಷ್ಪ ಸುರಿಸಿದವು!
    *****