ಬೆಂಗಳೂರಿನಲ್ಲಿ ಪೊಲೀಸ್ ಹುತಾತ್ಮ ಸಿ.ಹನುಮಂತಪ್ಪರವರ ಪತ್ನಿ ಕಮಲಮ್ಮರಿಗೆ ಗೌರವ ಸನ್ಮಾನ

 

ಬಳ್ಳಾರಿ, ಅ.3: ಜಿಲ್ಲೆಯ ಹೆಮ್ಮೆಯ ಪೊಲೀಸ್ ಹುತಾತ್ಮ
ಮಾಲವಿ ಸಿ.ಹನುಮಂತಪ್ಪ ಅವರ ಪತ್ನಿ ಕಮಲಮ್ಮ ಅವರನ್ನು ವಿಶ್ರಾಂತ ಪೊಲೀಸ್ ಮಹಾ ನಿರ್ದೇಶಕ ಶಂಕರ ಮಹಾದೇವ ಬಿದರಿ ಮತ್ತಿತರ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಬೆಂಗಳೂರಿನಲ್ಲಿ ಭಾನುವಾರ ಜರುಗಿದ ವಿಶ್ರಾಂತ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಶಂಕರ ಮಹಾದೇವ ಬಿದರಿ ಅವರ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕಮಲಮ್ಮ ಮತ್ತು ಮತ್ತೋರ್ವ ಪೊಲೀಸ್ ಹುತಾತ್ಮ ಎಂ.ಕೆ. ಪೊನ್ನಪ್ಪ ಅವರ ಪತ್ನಿ ಜಯಲಕ್ಷ್ಮಿ ಅವರನ್ನು ಗಣ್ಯರು ಸತ್ಕರಿಸಿದರು.
ತಮ್ಮ ಜತೆ ಕರ್ತವ್ಯ ನಿರ್ವಹಿಸಿ ಹುತಾತ್ಮರಾದ ಹನುಮಂತಪ್ಪ ಮತ್ತು ಪೊನ್ನಪ್ಪ ಅವರಿಗೆ ಸತ್ಯಮೇವ ಜಯತೇ ಕೃತಿಯನ್ನು ಶಂಕರ ಬಿದರಿ ಅವರು ಅರ್ಪಿಸಿದ್ದಾರೆ. ಹಾಗೂ ಕಾರ್ಯಕ್ರಮಕ್ಕೆ ಹುತಾತ್ಮ ಕುಟುಂಬದ ಸದಸ್ಯರನ್ನು ಆಹ್ವಾನಿಸಿ ಸೂಕ್ತ ಗೌರವ ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಹಿರಿಯ ಸಾಹಿತಿ, ಸಂಶೋಧಕ ಡಾ. ಗುರುಲಿಂಗ ಕಾಪಸೆ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅನಿಲ್ ವಿನಾಯಕ ಗೋಕಾಕ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ನಿವೃತ್ತ ಡಿಜಿಪಿ ಶಂಕರ ಬಿದರಿ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತಮ್ಮನ್ನು ಬೆಂಗಳೂರಿಗೆ ಆಹ್ವಾನಿಸಿ ಸೂಕ್ತ ಗೌರವ ಸಲ್ಲಿಸಿದ್ದಾರೆ ಎಂದು ಕಮಲಮ್ಮ ತಿಳಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಅವರು ಶಂಕರ ‌ಬಿದರಿ ಅವರು ತಮ್ಮ ಆತ್ಮಕಥೆಯನ್ನು ನನ್ನ ಪತಿ ಹನುಮಂತಪ್ಪ ಅವರಿಗೆ ಅರ್ಪಿಸಿರುವುದಕ್ಕೆ ತಮ್ಮ ಕುಟುಂಬ ಕೃತಜ್ಞತೆ ಅರ್ಪಿಸುತ್ತದೆ. ಬೆಂಗಳೂರಿನಲ್ಲಿ ನಮ್ಮ ಕುಟುಂಬದ ಸದಸ್ಯರನ್ನು ಅತ್ಯಂತ ಗೌರವ, ಪ್ರೀತಿಯಿಂದ ಕಂಡರು ಎಂದು ಹರ್ಷ ವ್ಯಕ್ತಪಡಿಸಿದರು.


*****