ಬಳ್ಳಾರಿ, ಅ.10: ಕರ್ನಾಟಕ ಲಲಿತಕಲಾ ಅಕಾಡೆಮಿ ಎಲೆಮರೆಯಾಗಿ ಕಾಯಿಯಾಗಿ ಸಾಧನೆ ಮಾಡಿದ ಚಿತ್ರಕಲಾವಿದರಿಗೆ ನೀಡುವ 2021-22ನೇ ಸಾಲಿನ ರಾಜ್ಯಮಟ್ಟದ ವರ್ಣಶ್ರೀ ಪ್ರಶಸ್ತಿಗೆ ನಗರದ ಪ್ರತಿಭಾವಂತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರು ಆಯ್ಕೆಯಾಗಿದ್ದಾರೆ.
ಈ ಕುರಿತು ಭಾನುವಾರ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮಾಹಿತಿ ನೀಡಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ಅವರು, ರಾಜ್ಯ ಸರಕಾರ ಮೊದಲ ಬಾರಿಗೆ ವರ್ಣಶ್ರೀ ಪ್ರಶಸ್ತಿಯನ್ನು ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶೇಷವಾಗಿ ಎಲೆ ಮರೆಕಾಯಿಯಾಗಿ ಸೇವೆ ಸಲ್ಲಿಸಿದ ಚಿತ್ರಕಲಾವಿದರಿಗೆ ನೀಡಿ ಉತ್ತೇಜಿಸಲು ಎರಡು ವರ್ಷದ ಹಿಂದೆಯೇ ಒಪ್ಪಿಗೆ ನೀಡಿತ್ತು. ಕೋವಿದ್ ಹಿನ್ನಲೆಯಲ್ಲಿ ಪ್ರಶಸ್ತಿ ಪ್ರಕಟಿಸಿ ಪ್ರದಾನಮಾಡಲು ಆಗಿರಲಿಲ್ಲ.
ಸರಕಾರದ ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಕಾಯದೇ ತಮ್ಮ ಪಾಡಿಗೆ ಕಾರ್ಯನಿರ್ವಹಿಸವವರಿಗೆ ವರ್ಣಶ್ರೀ ಪ್ರಶಸ್ತಿಯನ್ನು ಮೊದಲಬಾರಿಗೆ ನೀಡಲಾಗುತ್ತದೆ ಎಂದು ಹೇಳಿದರು.
ಮಂಜುನಾಥ ಗೋವಿಂದವಾಡ ಸೇರಿದಂತೆ ನಾಡಿನ 10 ಜನ ಚಿತ್ರಕಲಾವಿದರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದರು.
ಪ್ರಶಸ್ತಿಯು ತಲಾ 25ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಶೀಘ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಗೋವಿಂದವಾಡ ಅವರಿಗೆ ಪ್ರಶಸ್ತಿ ಲಭಿಸಿರುವುದನ್ನು ಅವಿಭಜಿತ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಲೋಕ ಸ್ವಾಗತಿಸಿದ್ದು, ಸಂಭ್ರಮಿಸುತ್ತಿದೆ.
ಜವಾಬ್ದಾರಿ ಹೆಚ್ಚಿಸಿದೆ: ಕರ್ನಾಟಕ ಲಲಿತಕಲಾ ಅಕಾಡೆಮಿ ಮೊದಲಬಾರಿಗೆ ನೀಡುತ್ತಿರುವ ವರ್ಣಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತೋಷವಾಗಿದೆ. ಎರಡು ದಶಕಗಳ ಚಿತ್ರಕಲಾ ಸೇವೆಯನ್ನು ಅಕಾಡೆಮಿ ಗುರುತಿಸಿರುವುದಕ್ಕೆ ಋಣಿಯಾಗಿದ್ದೇನೆ. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಪ್ರೋತ್ಸಾಹವು ದೊರೆತಿದೆ ಎಂದು ಮಂಜುನಾಥ ಸಂತಸ ವ್ಯಕ್ತಪಡಿಸಿದರು.
ಕಿರುಪರಿಚಯ: ನಗರದ ಮಂಜುನಾಥ ಗೋವಿಂದವಾಡ ಅವರು ಹಂಪಿ ಉತ್ಸವ ಸೇರಿದಂತೆ ರಾಜ್ಯ, ರಾಷ್ಟ್ರ ಮಟ್ಟದ ಹಲವು ಉತ್ಸವ, ಸಭೆ, ಕಾರ್ಯಕ್ರಮಗಳ ವೇದಿಕೆ ವಿನ್ಯಾಸ, ನಾಡಿನಾದ್ಯಂತ ಐವತ್ತಕ್ಕೂ ಹೆಚ್ಚು ಚಿತ್ರ ಕಲಾಪ್ರದರ್ಶನ ಹಮ್ಮಿಕೊಂಡು ಗಮನ ಸೆಳೆದಿದ್ದಾರೆ. ಆಕರ್ಷಕ ಪುಸ್ತಕಗಳ ಮುಖ ಪುಟ, ಲೋಗೋ ವಿನ್ಯಾಸದಲ್ಲೂ ತಮ್ಮ ಕೈಚಳಕ ಮೂಡಿಸಿದ್ದಾರೆ.
ಅಭಿನಂದನೆ: ವರ್ಣಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಮಂಜುನಾಥ ಗೋವಿಂದವಾಡ ಅವರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಟಿ.ಕೊಟ್ರಪ್ಪ, ಕರ್ನಾಟಕ ಜಾನಪದ ಪರಿಷತ್ತು ಪ್ರಧಾನ ಕಾರ್ಯದರ್ಶಿ ಡಾ.ಅಶ್ವರಾಮು, ಖಜಾಂಚಿ ಸುರೇಶ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಎಚ್. ಎಂ ಬಸವರಾಜ್, ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಹಂದ್ಯಾಳ್ , ಸಿಜಿಕೆ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಎಸ್ ಎಂ ಹುಲುಗಪ್ಪ, ಯುವ ಗಾಯಕ ಅನುಮಯ್ಯ, ಕನ್ನಡ ಪರ ಹೋರಾಟಗಾರ ಚಂದ್ರಶೇಖರ ಆಚಾರ್
ಮತ್ತಿತರ ಗಣ್ಯರು ಅಭಿನಂದಿಸಿದ್ದಾರೆ.
ಸರಳ, ಸಜ್ಜನಿಕೆಯ ಪ್ರತಿಭಾಶಾಲಿ ಮಂಜುನಾಥ ಗೋವಿಂದವಾಡ ಅವರಿಗೆ ಮತ್ತಷ್ಟು ಉನ್ನತಮಟ್ಟದ ಪ್ರಶಸ್ತಿ ಗೌರವಗಳು ಹುಡುಕಿಕೊಂಡು ಬರಲಿ ಎಂದು ಹಾರೈಸಿದ್ದಾರೆ.
******