ಅನುದಿನ ಕವನ-೬೫೦, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ತೋರಣಗಲ್ಲು, ಕವನದ ಶೀರ್ಷಿಕೆ:ನಶ್ವರದ ಮನ

ನಶ್ವರದ ಮನ

ಬರುತ್ತಿರುವ ಮಳೆಯಲ್ಲೂ
ಮನದ ಅಗ್ನಿ ಜ್ವಾಲೆಯು
ಅಳುತಿದೆ.
ಗೊತ್ತಿಲ್ಲ, ಮನದ ಅಗ್ನಿ ಜ್ವಾಲೆಯು ಅಳುತಿದೆ….

ಸಿಡಿಲೇಳುವ ಗುಡುಗು
ಮಿಂಚಿನೊಳು ಮನ:
ಫಳ್ ಎಂದು ಸಿಡಿದು
ಒಡೆದು ಚೂರಾಗಿದೆ……

ಮರದ ಮೇಲೇ ಬಿದ್ದ
ಹನಿಗಳೆಲ್ಲಾ ಕಣ್ಣ ಪಿಳುಕಿಸಿ
ನೋಡುತಿವೆ…..

ಹಿಸುಕಿದೆ ಕತ್ತು
ಜೀವಂತ ಶವದ ಬೆಂಕಿಯೊಳು
ಹರಕು ಚಪ್ಪರದ ತೂತಿನೊಳು
ತಲೆ ಬುಡವಿಲ್ಲದ ಸೂರಿನಡಿಯಲ್ಲಿ ಸಾರಾಯಿ
ಸುಮ್ಮನೆ ತಿರುಗುತಿದೆ….

ಆದರೂ ಬಾಯಾರಿಕೆಯ
ತೃಶೆಗೆ ಜಾತಿಯ ಜನಿವಾರ
ಅಡ್ಡ ಬರುತ್ತಿದೆಯಲ್ಲಾ…..

ಆಲೋಚನೆಯ ಕಬಳಿಕೆಗೆ
ಮಾನವತೆ ಹೇಳ ಹೆಸರಿಲ್ಲದೆ
ರೈಲು ಭೊಗಿಯೊಳು ಸಾಗುತ್ತಲೇ ಇದೆ….

ಇದನ್ನೆಲ್ಲಾ ಕಂಡು
ಯಾವ ಹಾದಿಯ ಹಿಡಿಯಲಿ?
ನಶ್ವರವಾದ. ವಾದ,,ವಿವಾದದೊಳು ಸಿಲುಕಿ
ನ್ಯಾಯ ಸಿಗದೇ ಹಾದಿಯ
ಮಳೆಯೊಂದಿಗೆ
ವಿಲ ವಿಲನೆ ನಿಟ್ಟುಸಿರು ಬಿಡುತಿದೆ…..

ವಿಷದ ನಂಟು ಶ್ವಾಸದೊಳು
ಸೇರಿ
ಪ್ರೀತಿಯ ಮತ್ತ ಮರಿಸಿದೆ…

ನಂಬಲಾರದ ಮೋಹಕೆ
ನೂರೆಂಟು ತವಕ
ಕಲೆ ಸಂಸ್ಕೃತಿಯ ಮಿಲನಕೆ
ಸಂಪ್ರದಾಯದ ದಾರ ಅಡ್ಡವಾಗುತಿದೆ…..

ಹೇ ಭೂಮಿಗೆ ತಂದ ಶಕ್ತಿಯೆ
ದಿನದ ಸಾಂಗತ್ಯಕ್ಕೆ ಇಹದ ಎಣಿಕೆ ಶಾಶ್ವತವಿಲ್ಲದ ಇಳೆಯ
ಕಂಡು ನಗಾಡುತಿದೆ…..

-ಡಾ.ಕೃಷ್ಣವೇಣಿ ಆರ್ ಗೌಡ, ತೋರಣಗಲ್ಲು, ಬಳ್ಳಾರಿ ಜಿ.

*****