ಇಂದು ರಾತ್ರಿ ಹಲಕುಂದಿ ಮಠದಲ್ಲಿ ರಾಹುಲ್‌ಗಾಂಧಿ ವಾಸ್ತವ್ಯ: ಐತಿಹಾಸಿಕ ಬಳ್ಳಾರಿ ಮುನಿಸಿಪಲ್ ಹೈಸ್ಕೂಲ್‌ ಮೈದಾನದಲ್ಲಿ ನಾಳೆ ಬೃಹತ್ ಬಹಿರಂಗ ಸಭೆ

(ಸಿ.ಮಂಜುನಾಥ)
ಬಳ್ಳಾರಿ, ಅ.13: ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಪ್ಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಅಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಭಾಷಣ ಮಾಡಿದ ಐತಿಹಾಸಿಕ ಎಕ್ಸ್ ಮುನಿಸಿಪಲ್ ಕಾಲೇಜ್ ಮೈದಾನದಲ್ಲಿ ಎಐಸಿಸಿ‌ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ‌ ಅವರು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಲಕ್ಷಾಂತರ ಜನರ ಸಮ್ಮುಖದಲ್ಲಿ ತಮ್ಮ‌ ಮನದಾಳದ ಮಾತುಗಳನ್ನು ಆಡಲಿದ್ದಾರೆ.


ಹಾದು! ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಅವರು ತಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಸಾವಿರಾರು ಜನರೊಂದಿಗೆ ಆಂಧ್ರಪ್ರದೇಶದ ಗಡಿ ದಾಟಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮವನ್ನು ಶುಕ್ರವಾರ ಸಂಜೆ ಪ್ರವೇಶಿಸಲಿದ್ದಾರೆ. ಇದೇ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ‌ ಮಠ(ವಿಬಿಎಸ್)ದ ಆವರಣದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಬೆಳಿಗ್ಗೆ 6-30ಕ್ಕೆ ಹಲಕುಂದಿಯಿಂದ ಪಾದಯಾತ್ರೆ ಮೂಲಕ ರಾಹುಲ್‌ಗಾಂಧಿ ಅವರು ನಗರಕ್ಕೆ ಆಗಮಿಸುವರು.


ತಮ್ಮ‌ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರನ್ನು ಭವ್ಯವಾಗಿ ಸ್ವಾಗತಿಸಲು ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್ ‌ಮುಖಂಡರು, ಕಾರ್ಯಕರ್ತರು ಭರದ ಸಿದ್ಧತೆ ನಡೆಸಿದ್ದಾರೆ.
ಬಹಿರಂಗ ಸಭೆ ನಡೆಯುವ ಮುನಿಸಿಪಲ್ ಮೈದಾನಕ್ಕೆ ಶುಕ್ರವಾರ ಬೆಳಿಗ್ಗೆ ಕರ್ನಾಟಕ ಕಹಳೆ ಡಾಟ್ ಕಾಮ್ ‌ಭೇಟಿ ನೀಡಿದಾಗ ನೂರಕ್ಕೂ ಹೆಚ್ಚು ಕಾರ್ಮಿಕರು ವೇದಿಕೆ, ಬೃಹತ್ ಪೆಂಡಾಲ್, ಡಿಜಿಟಲ್ ಪರದೆಯನ್ನು ಸಜ್ಜುಗೊಳಿಸುತ್ತಿದ್ದರು.
ಅವಿಭಜಿತ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಜತೆ ಉತ್ತರ, ಕಲ್ಯಾಣ ಕರ್ನಾಟಕದ ಮುಖಂಡರು, ಬೆಂಬಲಿಗರು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ಲಕ್ಷ ಸಭಿಕರು ಭಾಗವಹಿಸುವ ನೀರಿಕ್ಷೆ ಪಕ್ಷದ ಮುಖಂಡರಲ್ಲಿದೆ. ಹೀಗಾಗಿ ತಮ್ಮ ಅಧಿನಾಯಕನ ಕಾರ್ಯಕ್ರಮ ಯಾವುದೇ ಲೋಪವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ ಶ್ರಮಿಸುತ್ತಿದ್ದಾರೆ.


ಕಳೆದ ಎಂಟತ್ತು ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲ್ ಸೇರಿದಂತೆ ಹಲವು ಗಣ್ಯರು ಮುನಿಸಿಪಲ್ ಮೈದಾನವನ್ನು ಪರಿಶೀಲಿಸಿ ದ್ದಾರೆ. ಬುಧವಾರ ಸಂಜೆ ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮುಖಂಡರು ಭದ್ರತೆ ಕುರಿತಂತೆ ಚರ್ಚಿಸಿದರು.
ಎಐಸಿಸಿ ಕಾರ್ಯದರ್ಶಿ ಶ್ರೀಧರಬಾಬು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ ಮತ್ತಿತರರು ನಗರದಲ್ಲಿ ಠಿಕಾಣಿ ಹೂಡಿ ಸಿದ್ಧತೆಗಳನ್ನು ವೀಕ್ಷಿಸುತ್ತಿದ್ದಾರೆ.
ಬಳ್ಳಾರಿ ಗ್ರಾಮಾಂತರ ಶಾಸಕ ಬಿ.‌ನಾಗೇಂದ್ರ, ಜಿಲ್ಲೆಯ ಶಾಸಕರು, ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ, ಕಾರ್ಪೋರೇಟರ್ ಗಳು, ಜಿಲ್ಲೆಯ ಮಾಜಿ ಸಚಿವ ಎಂ.ದಿವಾಕರ ಬಾಬು,  ಶಾಸಕರು, ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ.


ಅವಿಭಜಿತ ಬಳ್ಳಾರಿ ಜಿಲ್ಲೆ ಐದೂವರೆ ದಶಕಗಳಿಂದ ಕಾಂಗ್ರೆಸ್ ಭದ್ರ‌ಕೋಟೆಯಾಗಿತ್ತು ಮಾತ್ರವಲ್ಲ, 1999ರಿಂದ ಗಾಂಧಿ ಕುಟುಂಬಕ್ಕೆ ಭಾವನಾತ್ಮಕ ಸಂಬಂಧವನ್ನು ಬೆಸೆದಿದೆ. ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಅವರು 1999ರಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ಸುಷ್ಮಾ ಸ್ವರಾಜ್ ಅವರನ್ನು 56100 ಮತಗಳ ಭಾರಿ ಅಂತರದಿಂದ ಪರಾಭವ ಗೊಳಿಸಿದ್ದರು. ಈ ಹಿನ್ನಲೆಯಲ್ಲೂ ಶನಿವಾರ ನಡೆಯುವ ರಾಹುಲ್ ಗಾಂಧಿ ಅವರ ಬಹಿರಂಗ ಸಭೆ ವಿಶೇಷ ಗಮನ ಸೆಳೆಯಲಿದೆ. ಕಾರಣ ಭಾಷಣದಲ್ಲಿ ತಮ್ಮ ತಾಯಿ ಸೋನಿಯಾಗಾಂಧಿ ಅವರ ಬಳ್ಳಾರಿಯ ಚುನಾವಣಾ ದಿನಗಳನ್ನು ಸ್ಮರಿಸುವ ಮೂಲಕ ರಾಹುಲ್ ಗಾಂಧಿ ಅವರು ಕನ್ನಡಿಗರ ಮನಗೆಲ್ಲಲು ಪ್ರಯತ್ನಿಸ ಬಹುದು. ದೇಶದಲ್ಲಿ ಜನ ಸಾಮಾನ್ಯರು ಎದುರಿಸುತ್ತಿರುವ ನಿರುದ್ಯೋಗ, ಬಡತನ, ಆರ್ಥಿಕ‌ ಕುಸಿತ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಪ್ರಸ್ತಾಪಿಸಿ ಕೇಂಧ್ರ, ರಾಜ್ಯದ ಬಿಜೆಪಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ ಎಂದು ಮುಖಂಡರೊಬ್ಬರು ತಿಳಿಸಿದರು.


ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಯಶಸ್ಸಿನ ಬಳಿಕ ಭಾರತ್ ಜೋಡೊ ಯಾತ್ರೆಯ ಬಳ್ಳಾರಿಯ ಬಹಿರಂಗ ಸಭೆ
ಬರುವ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ
ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಹುಮ್ಮಸ್ಸು, ಉತ್ಸಾಹ ತುಂಬುವಲ್ಲಿ ಸಹಾಯಕವಾಗುವುದಂತು ದಿಟ.
*****