ಬಳ್ಳಾರಿ, ಅ. 15: ಚಿತ್ರದುರ್ಗ, ಆಂಧ್ರದ ಅನಂತಪುರ ಜಿಲ್ಲೆಯ ಮೂಲಕ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ತಾಲೂಕಿನ ಹಲಕುಂದಿ ಗ್ರಾಮವನ್ನು ಶುಕ್ರವಾರ ಸಂಜೆ 6-30ರ ಸುಮಾರಿಗೆ ತಲುಪಿತು.
ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಮಠದ ಬಳಿ ರಾಹುಲ್ ಗಾಂಧಿ ಹಾಗೂ ಪಾದಯಾತ್ರಿಗಳು ವಾಸ್ತವ್ಯ ಹೂಡಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲ್, ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ರಾಜ್ಯದ ಮಾಜಿ ಸಚಿವರು, ಗಣ್ಯರು ಪಾದ ಯಾತ್ರೆಯಲ್ಲಿ ತಮ್ಮ ನಾಯಕನೊಂದಿಗೆ ಹೆಜ್ಜೆ ಹಾಕಿದರು.
ಇಂದಿನ ವಿಶೇಷವೆಂದರೆ ರಾಹುಲ್ ಗಾಂಧಿ ಅವರು ರಾಮಾಂಜನೇಯ ಪಾತ್ರಧಾರಿಗಳಾದ
ಹಗಲುವೇಷಗಾರ ಕಲಾವಿದರ ಜತೆ ಸ್ವಲ್ಪಹೊತ್ತು ಸಂತಸದಿಂದ ನಡೆದರು.
ಶನಿವಾರ ಬೆ.6-30 ಗಂಟೆಗೆ ಹಲಕುಂದಿ ಗ್ರಾಮದಿಂದ ಭಾರತ್ ಜೋಡೊ ಯಾತ್ರೆ ಕೇವಲ 10 ಕಿ. ಮೀ ದೂರದಲ್ಲಿರುವ ಬಳ್ಳಾರಿ ನಗರವನ್ನು ತಲುಪಲಿದ್ದು ಒಟ್ಟು 1000 ಕಿಮೀ ದೂರವನ್ನು ಕ್ರಮಿಸಿದಂತಾಗಿದೆ.
ಇಲ್ಲಿನ ಕಮ್ಮಾ ಭವನದಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಿ ವಿಶ್ರಾಂತಿ ಪಡೆಯುವರು. ಮಧ್ಯಾಹ್ನ 1-30ಕ್ಕೆ ಐತಿಹಾಸಿಕ ಮುನಿಸಿಪಲ್ ಮೈದಾನದಲ್ಲಿ ನಡೆಯಲಿರುವ ಬೃಹತ್ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಪಾಲ್ಗೊಂಡು ಸಭಿಕರನ್ನು ಉದ್ದೇಶಿಸಿ ಮಾತನಾಡುವರು.
ಸಭೆ ಬಳಿಕ ಶಿಲಾಯುಗದ ಪಳೆಯುಳಿಕೆ ಇರುವ ಸಂಗನಕಲ್ಲು ಗ್ರಾಮದ ಬಳಿ ಪಾದಯಾತ್ರೆ ತಂಗಲಿದೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಭಾರತ್ ಜೋಡೊ ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ಯಾತ್ರೆ ಎಂದು ಬಣ್ಣಿಸಿದರು.
ಶನಿವಾರದ ಬೃಹತ್ ಬಹಿರಂಗ ಸಭೆಯಲ್ಲಿ ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿಗಳು ಸೇರಿದಂತೆ ಹಲವು ಗಣ್ಯಾತಿಗಣ್ಯ ನೇತಾರರು ಭಾಗವಹಿಸುವರು ಎಂದು ಹೇಳಿದರು.
*****