371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ

ಬಳ್ಳಾರಿ, ಅ.15: ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ವಿಶೇಷ ಕಾಲಂ‌ ಜಾರಿಗೊಳಿಸಿದ ರಾಹುಲ್ ಗಾಂಧಿ‌ ಮತ್ತು ಸೋನಿಯಾ ಗಾಂಧಿ ಅವರನ್ನು ಯಾವತ್ತೂ ಈ ಭಾಗದ ಜನತೆ ಮರೆಯಬಾರದು
ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ನಗರದಲ್ಲಿ ಶನಿವಾರ ಜರುಗಿದ ಭಾರತ್ ಜೋಡೋ ಯಾತ್ರೆ ಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಗಾಗಿ 371 ಜೆ ಕಾಲಂ ನ್ನು ಯುಪಿಎ ಸರಕಾರ ಜಾರಿ‌ಮಾಡಿ ಅನುಷ್ಠಾನ ಗೊಳಿಸಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿಶೇಷ ಆಸಕ್ತಿ, ಒತ್ತಾಸೆಯಿಂದ ಏಳು ಜಿಲ್ಲೆಗಳಿಗೆ ಒಳಿತಾಯಿತು ಎಂದರು.
ದೇಶದಲ್ಲಿ ಆರ್ ಎಸ್ ಎಸ್-ಬಿಜೆಪಿ ಅಶಾಂತಿ ಉಂಟುಮಾಡುತ್ತಿವೆ, ಜನರಲ್ಲಿ‌ವಿಷ ಬೀಜ ಬಿತ್ತುತ್ತಿವೆ ಎಂದು ಆಪಾದಿಸಿದರು.
ಭಾರತ್ ಜೋಡೋ ಯಾತ್ರೆ ನೇತೃತ್ವವಹಿಸಿರುವ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಎಲ್ಲರ ಬೆಂಬಲವಿದೆ. ಮೂರು ರಾಜ್ಯಗಳ ಮೂಲಕ ಒಂದು ಸಾವಿರ ಕಿ.‌ಮೀ ಕ್ರಮಿಸಿರುವ ರಾಹುಲ್ ಗಾಂದಿ ಅವರು ಇನ್ನೂ 2700 ಕಿ.ಮೀ ದೂರದ ಗುರಿಯನ್ನು ಯಶಸ್ವಿಯಾಗಿ ಮುಟ್ಟುತ್ತಾರೆ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಿನಿಂದ ಕಮೀಷನ್ ಬಿಜೆಪಿ ಸರ್ಕಾರವನ್ನು ಬದಲಾಯಿಸ ಬೇಕು ಎಂದರು.


ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಸಂವಿಧಾನ ಅಪಾಯದಲ್ಲಿದೆ. ಆರ್ ಎಸ್ ಎಸ್ ಮೊದಲಿನಿಂದಲೂ ಸಂವಿಧಾನ, ರಾಷ್ಟ್ರಗೀತೆಯನ್ನು ವಿರೋಧ ಮಾಡ್ತಾ ಇದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು, ತಾವು ಸಿಎಂ ಆಗಿದ್ದು ಸಂವಿಧಾನದಿಂದ ಎಂಬುದನ್ನು ಮರೆಯ ಬಾರದು ಎಂದು ಹೇಳಿದರು.
ಸಂವಿಧಾನ ಉಳಿಸಲು ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ ಎಂದರು.
ಟ್ವೀಟ್ ಮೂಲಕ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂದು ಕೆಣಕ್ಕಿದ್ದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿದ್ಧ ರಾಮಯ್ಯ ಅವರು ಜಿಲ್ಲೆಯಲ್ಲಿ 1977ರಲ್ಲಿ ವಿಜಯ ಉಕ್ಕು ಕಾರ್ಖಾನೆ ಸ್ಥಾಪಿಸಿದ್ದು, 2000-01 ರಲ್ಲಿ ಬಳ್ಳಾರಿಯ ಕುಡುತಿನಿ‌ ಥರ್ಮಲ್ ಪವರ್ ಕೇಂದ್ರವನ್ನು ಆರಂಭಿಸಿದ್ದು ‘ಯಾರಪ್ಪ ಶ್ರೀ ರಾಮುಲು’ ಎಂದು ವಾಗ್ದಾಳಿ ‌ನಡೆಸಿದರು.
ಪೆದ್ದ ಶ್ರೀರಾಮುಲು: ನಮಗೆ ಚರ್ಚೆಗೆ ಆಹ್ವಾನ ಕೊಡ್ತಿಯಾ? ನಿನ್ನಂಥ ಪೆದ್ದನ ಜತೆ ಚರ್ಚೆ ಮಾಡುವುದಿಲ್ಲ. ಬೇಕಾದರೆ ಮಾಜಿ ಸಂಸದ ಉಗ್ರಪ್ಪ ಅವರನ್ನು ಕಳುಹಿಸುತ್ತೇವೆ ಎಂದ ಅವರು ನಿಮ್ಮ ಸಾಧನೆ ಬರೀ ಲೂಟಿ‌ಮಾಡಿದ್ದು ಎಂದು‌ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭಾರತ್ ಜೋಡೋ ಕೇವಲ ಪಾದಯಾತ್ರೆ ಅಲ್ಲ, ಇದೊಂದು ಆಂದೋಲನ, ಕ್ರಾಂತಿ ಎಂದು ಬಣ್ಣಿಸಿದರು.

ಬಹಳ‌ಕಷ್ಟ ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷನಾದೆ. ಫ್ರೀಡಂ ಮಾರ್ಚ್, ಮೇಕೆದಾಟು ಪಾದಯಾತ್ರೆ ಮಾಡಿದೆ.
ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಬೇಕಿದೆ. ಈ ಹಿನ್ನಲೆಯಲ್ಲಿ ನಮ್ಮ ಹೋರಾಟ ನಡೆದಿದೆ ಎಂದರು.
ಸಮಾವೇಶದಲ್ಲಿ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಷ್ ಗಡ್ ಮುಖ್ಯ ಮಂತ್ರಿ ಭೂಪೇಶ್ ಭಾಗೇಲ್, ಹಿರಿಯ ನಾಯಕರಾದ ಸುರ್ಜಿವಾಲ, ಕಮಲನಾಥ್, ದ್ವಿಗ್ವಿಜಯ ಸಿಂಗ್, ಡಾ.ಜಿ.ಪರಮೇಶ್ವರ, ಹೆಚ್. ಆಂಜನೇಯಲು, ಡಾ ಹೆಚ್.ಸಿ.ಮಹಾದೇವಪ್ಪ ಎಂ.ಬಿ.ಪಾಟೀಲ್, ಎಲ್.ಹನಂಮತಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರುಗಳಾದ ಎಂ.ದಿವಾಕರಬಾಬು, ಸಂತೋಷ್ ಲಾಡ್ , ಮೇಯರ್ ಎಂ.ರಾಜೇಶ್ವರಿ, ಜಿಲ್ಲೆಯ ಶಾಸಕರು ಸೇರಿದಂತೆ ಕಾರ್ಯಕ್ರಮದಲ್ಲಿ ಕೆಪಿಸಿಸಿ, ಡಿಸಿಸಿ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಗರ ದೇವತೆ ಶ್ರೀ ಕನಕ‌ದುರ್ಗಮ್ಮಗೆ ಬೆಳ್ಳಿ ಖಡ್ಗವನ್ನು ರಾಹುಲ್ ಗಾಂಧಿ ಅವರು ನೀಡಿದರು. ಸಮಾವೇಶದಲ್ಲಿ ಈ ಖಡ್ಗವನ್ನು ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರೊಂದಿಗೆ ಪ್ರದರ್ಶಿಸಿದರು.
*****