ಬಳ್ಳಾರಿ, ಅ.16: ನಗರದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಬೃಹತ್ ಬಹಿರಂಗ ಸಮಾವೇಶನ್ನು ಸರ್ಕಸ್ ಗೆ ಹೋಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಅಣಕವಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸೂಕ್ಷ್ಮವಾಗಿ ಸಮಾವೇಶ ಗಮನಿಸಿದೆ, ಇದು ಒಂದು ಸರ್ಕಸ್ ಕಂಪನಿಯಂತೆ,
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಂಪನಿಯ ಜೋಕರ್ ರಂತೆ ಕಂಡರು ಎಂದು ಹೇಳಿದರು.
ಸಮಾವೇಶದ ಭರ್ಜರಿ ಯಶಸ್ಸು ಹಾಗೂ ವೇದಿಕೆಯಲ್ಲಿ ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದು ಲೇವಡಿ ಮಾಡಿದ್ದಕ್ಕೆ ಹತಾಶಗೊಂಡಂತೆ ಕಂಡು ಬಂದ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸಿದರು.
ರಾಹುಲ್ ಗಾಂಧಿ, ಸಿದ್ದರಾಮಯ್ಯ ನಂತಹ ನೂರು ಜನರು ಬಂದರು, ಪಾದ ಯಾತ್ರೆ ನಡೆಸಿದರೂ ಈ ನೆಲದ ಜನರು ನನ್ನನ್ನು ಬಿಟ್ಟು ಕೊಡಲ್ಲ. ಸಿದ್ದರಾಮಯ್ಯ ಯುದ್ಧ ಭೂಮಿಯ ಉತ್ತರ ಕುಮಾರನಂತೆ ಜಂಭ ಕೊಚ್ಚಿಕೊಳ್ಳುವಂತೆ ಕಾಣಿಸಿದರು ಎಂದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಲೇ ಇಲ್ಲ. ಅಭಿವೃದ್ಧಿ ಚಕ್ರವ್ಯೂಹದ ಒಳಗೆ ಹೋಗಿ ಹೊರ ಬರಲಾಗದೇ
ಕೇವಲ ಉತ್ತರ ಕುಮಾರನ ಪೌರುಷದಂತೆ ಮಾತನಾಡಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳೋದು ಸತ್ಯ. ಯಾಕೆಂದರೆ ಅವರ ಪಾಪದ ಕೊಡ ತುಂಬಿದೆ ಹೀಗಾಗಿ ಇದು ನಿಜಕ್ಕೂ ಕೊನೆಯ ಚುನಾವಣೆಯಾಗಲಿದೆ ಎಂದು ತಿಳಿಸಿದರು.
ಶಕುನಿ: ಸಿದ್ಧರಾಮಯ್ಯ ರಾಜ್ಯ ರಾಜಕಾರಣದ ಶಕುನಿ ಇದ್ದಂತೆ. ಇವರ ರಾಜಕೀಯ ಇತಿಹಾಸ ನೋಡಿದರೆ ಜೆಡಿಎಸ್ ನಲ್ಲಿ ಬೆಂಕಿ ಹಚ್ಚಿದರು.
ಈಗ ಕಾಂಗ್ರೆಸ್ ನಲ್ಲಿ ಬೆಂಕಿಹಚ್ಚುವ ಕೆಲಸ ಮಾಡ್ತಾ ಇದ್ದಾರೆ. ಅಂದು ದೇವೇಗೌಡರಿಗೆ. ಇಂದು ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.
ನಾನು ಅವರ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯರಂತೆ ಪೆದ್ದನಲ್ಲ ಎಂದು ತಿರುಗೇಟು ನೀಡಿದರು.
ಸಂಡೇ ಮಂಡೇ ವಕೀಲಗಿರಿ ಮಾಡಿರೋ ಸಿದ್ದರಾಮಯ್ಯ ಬುದ್ಧಿವಂತ ರಾಗಿರ ಬಹುದು ಆದರೆ ಹೃದಯವಂತಿಕೆಯಲ್ಲಿ ಶ್ರೀರಾಮುಲುಗೆ ಯಾರು ಸಾಟಿಯಿಲ್ಲ. ನನ್ನ ಇತಿಹಾಸ ನೋಡಿ, ಮೋಸ ಮಾಡಿ ನಾನು ರಾಜಕೀಯ ಮಾಡಿಲ್ಲ.
ಅಹಿಂದ ಮುಖವಾಡ ಇಟ್ಟುಕೊಂಡು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಳಿದ್ರಿ. ಡಾ. ಜಿ. ಪರಮೇಶ್ವರನ್ನು ಸೋಲಿಸಿದ್ರಿ ನಿಮ್ಮದು ಶಕುನಿ ರಾಜಕೀಯ ಎಂದು ಮೂದಿಲಿಸಿದರು.
ಮೋದಿ, ಅಮೀತ್ ಷಾ ಸ್ವತಂತ್ರಕ್ಕೆ ಹೋರಾಟ ಮಾಡಿಲ್ಲವೆಂತಾರೆ ನೀವು ಹೋರಾಟ ಮಾಡಿದ್ದೀರೆನಪ್ಪ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
ಆರ್ ಎಸ್ಎಸ್ ಬಗ್ಗೆ ಮಾತನಾಡೋ ನೈತಿಕತೆ ನಿನಗೆ ಇಲ್ಲ. ಮುಖ್ಯಮಂತ್ರಿ ಇದ್ದಾಗ ಜಾತಿಗಳ ಮಧ್ಯೆವಿಷ ಬೀಜಬಿತ್ತಿರೋದು ಯಾರು ಎಂದು ಏಕವಚನದಲ್ಲಿ ಕೇಳಿದರು.
ಅಕ್ರಮದ ದಾಖಲೆಗಳು ಇವೆ ಎಂದು ಇದೀಗ ಡಿಕೆಶಿ ಅವರನ್ನೇ ಬ್ಲಾಕ್ ಮೇಲ್ ಮಾಡ್ತೀರಿ ಎಂದು ಆರೋಪಿಸಿದರು. ನಿಮ್ಮಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಮಯ ಬಂದಾಗ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಶ್ರೀರಾಮುಲು ಅವರು ಹಾರಿಕೆ ಉತ್ತರ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಸಂಸದೆ ಜೆ.ಶಾಂತ, ಪಕ್ಷದ ಜಿಲ್ಲಾ ಅಧ್ಯಕ್ಷ ಜಿ. ಮುರಹರಗೌಡ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮುಖಂಡರುಗಳಾದ ಹೆಚ್. ಹನುಮಂತಪ್ಪ, ಓಬಳೇಶ್, ತಿಮ್ಮಪ್ಪ ಮತ್ತಿತರರು ಇದ್ದರು.
*****