ಅನುದಿನ ಕವನ-೬೫೪, ಕವಯತ್ರಿ: ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಚಿಗುರು

ಚಿಗುರು

ನನ್ನ ಪ್ರೀತಿ ಬಳ್ಳಿ ಚಿಗುರಿದೆ.
ಚಿಗುರ ಚಿಮ್ಮಿ ಮೊಗ್ಗು ಹೂವು ತುಂಬಿ

ಅಂದು ಇಂದು ಕಾಣ್ವ ಕನಸು
ಮುಂದೆ ಸಾಗಿ ನನಸು ಎಂಬ ಆಸೆ ಮೂಡಿದೆ.
ನನ್ನ ಮನದ ಕಪ್ಪ ಮುಗಿಲು ಕರಗಿದೆ.

ಹರ್ಷವೆಲ್ಲ ವರ್ಷವಾಗಿ ಸುರಿಯುತಿರಲು
ನನ್ನ ಮನದ ಮಬ್ಬು ಮತ್ತೆ ಹರಿದು ಬೆಳಕ ಕಾಣ್ವ
ಬಯಕೆ ಬಲಿತು ಬಲದ ಬಯಕೆ ಕಣ್ಣ ತುಂಬಿದೆ.

ಹಸಿರ ಕಂಡು ನಲಿವ ಒಲ್ಮೆ ನನ್ನ ಮನವ ತುಂಬಿ
ಗಾಳಿಯಂತೆ ತೂಗಿ ಹಾಡು ಹುಟ್ಟಿ ನಲಿದಿದೆ.

ನನ್ನ ಮನವು ಸಾರ್ಥಕತೆಯ ಭಾವದಲ್ಲಿ
ನೋವ ತೊರೆದು ನಲಿದಿದೆ.ಹರ್ಷವೆಂಬ
ವರ್ಷದಲ್ಲಿ ನೆನೆದು ಅನುಭೂತಿ ಕಾಣ್ವ
ಮನದ ಕಿಂಡಿ ತನಗೆ ತಾನೆ ತೆರೆದಿದೆ.

-ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು

(ಚಿಗುರು) ಚಿತ್ರ: ಸಿದ್ಧರಾಮ ಕೂಡ್ಲಿಗಿ