ಅನುದಿನ‌ ಕವನ-೬೫೬, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ನೋಟಿನ ಘಮ

ನೋಟಿನ ಘಮ

ಕುರುಡು ಕಾಂಚಾಣದ ಕರುಣೆಗೆ
ನಿಯತ್ತು ಬಿಕರಿಯಾಗಿದೆ ಇಂದು.
ಧನಿಕರ ಬೂಟು ನೆಕ್ಕುವ ಲಾಲಸಿತನ
ಬಡವರ ರಕ್ತ ಹೀರುತ್ತಿದೆ!

ಕಛೇರಿಯ ಕಡತಗಳಿಗೂ
ನೋಟಿನ ಘಮ ಅಂಟಿಕೊಂಡಿದೆ
ಟೇಬಲ್ಲುಗಳ ಅಡಿಯಲ್ಲಿ ನಡೆಯುವ
ಬ್ರಹ್ಮಾಂಡ ಭ್ರಷ್ಟತೆ ಬೆಚ್ಚಿ ಬೀಳಿಸುತ್ತದೆ.
ಜಾಣ ಕುರುಡರಿಗೆ ಇದೆಲ್ಲ ಕಾಣಿಸದು

ಎಷ್ಟು ದಾಳಿಗಳು ನಡೆದರೂ
ಬೆಳೆಯುತ್ತಲೇ ಇದೆ….
ಭ್ರಷ್ಟರ ಪಟ್ಟಿ ಹನುಮನ ಬಾಲದಂತೆ
ಅಂತ್ಯ ಕಾಣದ ರಕ್ತ ಬೀಜಾಸುರರು
ಹುಟ್ಟುತ್ತಲೇ ಇದ್ದಾರೆ ಕೋಟಿ ಕೋಟಿ ಮುಕ್ಕಲು.

ಎಂಜಲು ಕಾಸಿನಾಸೆಗೆ
ಕೈಯೊಡ್ಡಿ ಹಲ್ಲುಕಿರಿವ
ಹಲಾಲುಕೋರರೇ…..
ಮುಟ್ಟಿಕೊಳ್ಳಿ ನಿಮ್ಮಾತ್ಮಸಾಕ್ಷಿ.
ಬೆವರ ಫಲವೇ ದಕ್ಕುವುದಿಲ್ಲ
ಹರಾಮಿ ಹಣ ಒಮ್ಮೆ ಮುಳುಗಿಸುತ್ತದೆ!

-ನಾಗೇಶ್ ಜೆ. ನಾಯಕ, ಸವದತ್ತಿ
*****