ಬಳ್ಳಾರಿಯಲ್ಲಿ ನಾಳೆಯಿಂದ ಮೂರು ದಿನ ಸಂಗಂ ವಿಶ್ವ ಕವಿ ಸಮ್ಮೇಳನ: ಪ್ರಸಿದ್ದ ಕವಿ ಡಾ. ಚಂದ್ರಶೇಖರ ಕಂಬಾರ ಚಾಲನೆ

ಬಳ್ಳಾರಿ, ಅ.20: ನಗರದಲ್ಲಿ ಮೊದಲ ಬಾರಿಗೆ ವಿಶ್ವ ಕವಿ ಸಮ್ಮೇಳನ ಅ.21 ರಿಂದ ಮೂರುದಿನಗಳ‌ ಕಾಲ ಸ್ಥಳೀಯ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.


ಇಲ್ಲಿನ ಅರಿವು ಸಂಘಟನೆ ಆಯೋಜಿಸಿರುವ ವಿಶ್ವ ಕವಿ ಸಮ್ಮೇಳನಕ್ಕೆ ಸಂಗಂ ಎಂದು ಹೆಸರಿಡಲಾಗಿದೆ. ಅ.21 ರಂದು ಶುಕ್ರವಾರ ಬೆಳಿಗ್ಗೆ 10-30 ಘಂಟೆಗೆ ಸಮ್ಮೇಳನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸುವರು.


ನಗರ ಶಾಸಕ ಜಿ.‌ಸೋಮಶೇಖರ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಸಚಿವರಾದ ಬಿ.ಶ್ರೀರಾಮುಲು,ಬಿ.ಎಸ್. ಆನಂದ್ ಸಿಂಗ್, ವಿ. ಸುನೀಲ್ ಕುಮಾರ್, ವಿ ಎಸ್ ಕೆ ವಿವಿ ಕುಲಪತಿ ಪ್ರೊ. ಸಿದ್ದು ಅಲಗೂರು, ಅವಿಭಜಿತ ಬಳ್ಳಾರಿ ಜಿಲ್ಲೆಯ ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಮೂರು ದಿನಗಳ ಕವಿ ಸಮ್ಮೇಳನದಲ್ಲಿ ವಿವಿಧ ದೇಶಗಳ ಸುಮಾರು ಹದಿನೈದು, ದೇಶದ 30 ಕವಿ- ಕವಯತ್ರಿಯರು ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ, ಕವಿ ಅಜಯ್ ಬಣಕಾರ್ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.


ಅ.22 ರಂದು ಸಂಜೆ ಆರು ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022 ನೇ ಸಾಲಿನ ಸಂಗಂ ಸಾಹಿತ್ಯ ಪುರಸ್ಕಾರಗಳನ್ನು ಪ್ರದಾನ ಮಾಡಲಿದ್ದಾರೆ.
ಅ.23ರಂದು ಸಂಜೆ 4-30ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ ಬರಗೂರು ರಾಮಚಂದ್ರಪ್ಪ ಅವರು ವಹಿಸುವರು. ಸಂಸದ, ಹಿರಿಯ ಕವಿ ಎಲ್. ಹನುಮಂತಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ.

ಪದ್ಮಶ್ರೀ ಮಂಜಮ್ಮ ಜೋಗತಿ, ಡಾ. ಎಸ್ ಜೆ ವಿ ಮಹಿಪಾಲ್, ಅರಿವು ಸಂಘಟನೆಯ ಸಿರಿಗೆರೆ ಪನ್ನರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು..
ಸಮ್ಮೇಳನದ ಸಂಯೋಜಕರೂ ಆಗಿರುವ ಪ್ರಸಿದ್ಧ ಕವಿ ಡಾ.‌ಎಚ್ ಎಸ್ ಶಿವಪ್ರಕಾಶ್ ಅವರು ಸಂಯೋಜಕರ ‌ನುಡಿಗಳನ್ನಾಡುವರು.

*****