ಬಳ್ಳಾರಿ, ಅ.21: ವಿಶ್ವದ ಎಲ್ಲಾ ಕವಿಗಳು ಜಾಗತಿಕ ಶಾಂತಿ ಮತ್ತು ನೆಮ್ಮದಿಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಕವಿ ಡಾ. ಚಂದ್ರಶೇಖರ ಕಂಬಾರ ಅವರು ಹೇಳಿದರು.
ನಗರದ ಅರಿವು ಸಂಘಟನೆ ಬಿಐಟಿಎಂ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮೂರುದಿನಗಳ ಸಂಗಂ ವಿಶ್ವಕವಿ ಸಮ್ಮೇಳನವನ್ನು ಶುಕ್ರವಾರ ಆನ್ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲಾ ಭಾಷೆಗಳು ಮಾನವ ಸಂವಾಹನೆ ಮತ್ತು ಭಾವನೆಗಳ ಅಭಿವ್ಯಕ್ತಿಗಾಗಿ ಇವೆ ಎಂದು ತಿಳಿಸಿದರು.
ವಿಶ್ವಮಾನವ ಪರಿಕಲ್ಪನೆಯನ್ನು ಸಂಗಂ ವಿಶ್ವಕವಿ ಸಮ್ಮೇಳನ ಹೊಂದಿದೆ ಎಂದು ಡಾ. ಕಂಬಾರ ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಅವರು ಮಾತನಾಡಿ ಬಳ್ಳಾರಿಯ ಪುಣ್ಯಭೂಮಿಯಲ್ಲಿ ವಿವಿಧ ದೇಶದ ಭಾಷೆಯ ಕವಿಗಳು ಆಗಮಿಸಿ ತಮ್ಮ ಕವನ ವಾಚನ ಮಾಡುವ ಮೂಲಕ ಈ ನೆಲವನ್ನು ಪವಿತ್ರವಾಗಿಸಿದ್ದಾರೆ ಎಂದು ಭಾವುಕರಾದರು.
ಮುಂದಿನ ದಿನಗಳಲ್ಲಿ ಅರಿವು ಸಂಘಟನೆ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ತಾವು ಸಹಕಾರ ನೀಡುವುದಾಗಿ ತಿಳಿಸಿದರು.
ಬಿ ಐ ಟಿ ಎಂ ಕಾಲೇಜಿನ ನಿರ್ದೇಶಕ ಯಶವಂತ ಭೂಪಾಲ್ ಅವರು ಮಾತನಾಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮ್ಮ ಸಂಸ್ಥೆಯಿಂದ ಸದಾ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ, ಹಿರಿಯ ಸಾಹಿತಿ ಡಾ. ಎಚ್ ಎಸ್ ಶಿವಪ್ರಕಾಶ್ ಅವರು ಮಾತನಾಡಿ ವಿಶ್ವಕವಿ ಸಮ್ಮೇಳನವನ್ನು ಹಮ್ಮಿಕೊಳ್ಳುವ ಮೂಲಕ ಜಗತ್ತಿಗೆ ಶಾಂತಿ ಸಂದೇಶವನ್ನು ಮತ್ತು ಭ್ರಾತೃತ್ವವನ್ನು ಸಾರುವಲ್ಲಿ ಸಮ್ಮೇಳನ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಇಸ್ರೇಲ್ ದೇಶದ ಕವಯತ್ರಿ ಶ್ರೀಮತಿ ದಿತಿ ರೊನೇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು.
ವೇದಿಕೆಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಆರ್ ಭೀಮಸೇನ, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಿವು ಸಂಘಟನೆಯ ಅಧ್ಯಕ್ಷ ಸಿರಿಗೆರೆ ಪನ್ನಾ ರಾಜ್ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಅರವಿಂದ ಪಟೇಲ ಸ್ವಾಗತಿಸಿದರು. ಗಂಗಾವತಿಯ ರಮೇಶ್ ಗಬ್ಬೂರು ಮತ್ರು ತಂಡ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ಉಮಾಮಹೇಶ್ವರಿ ಗಡ್ಡಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಅಜಯ ಬಣಕಾರ್ ವಂದಿಸಿದರು.
*****