ಅನುದಿನ ಕವನ-೬೫೯, ಕವಿ: ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ನಿಷೇಧಕ್ಕೊಳಪ್ಪಟ್ಟ ಒಂದು ನೋಟು

ಬಳ್ಳಾರಿಯಲ್ಲಿ ಆಯೋಜಿಸಿರುವ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಕಾವ್ಯಪ್ರಿಯರಿಂದ ಅಪಾರ ಮೆಚ್ಚುಗೆ  ಗಳಿಸಿದ ಕವನ….👇

ನಿಷೇಧಕ್ಕೊಳಪ್ಪಟ್ಟ ಒಂದು ನೋಟು

ನಿಷೇಧಕ್ಕೊಳಪಟ್ಟ ಒಂದು ನೋಟು
ನನ್ನಲ್ಲಿನ್ನೂ ಭದ್ರವಾಗಿದೆ!

ಮೀನು ಮಾರುವ ಹೆಂಗಸಿನ
ಬೆವರ ಉಪ್ಪು,
ಹೂ ಮಾರುವ ಹುಡುಗಿಯ
ಬೆರಳ ಕಂಪು,
ಮಾಂಸದಂಗಡಿಯವನ
ನೆತ್ತರ ಕೆಂಪು,
ಹಾಲಿನ ಹುಡುಗನ
ಬಿಸಿಯ ಹೆಪ್ಪು

ಪಿಂಚಣಿಗೆ ಕಾದು ಹಣ್ಣಾದ ಮುದುಕಿಯ ಮುಪ್ಪು
ಹವಾನಿಯಂತ್ರಿತ ಲಾಕರುಗಳ ತಂಪು
ದೇಹವನ್ನೇ ತನ್ನ ಬೆಲೆಗಿಳಿಸಿದ ವೇಶ್ಯೆಯ ಒಪ್ಪು
ಕಾಣಿಕೆಹುಂಡಿಯೊಳಗಿನ ಕತ್ತಲ ಕಪ್ಪು

ಎಲ್ಲವನ್ನೂ ಅನುಭವಿಸಿ
ಸವೆದು, ಮಾಸಿ, ಸುಕ್ಕಾಗಿ
ಅಪ್ಪನ ಕೈಸೇರುವಾಗ-
ಗಾಂಧಿಯ ಹರಿದ ನಗುವಿಗೆ
ತೇಪೆ ಹಾಕಲಾಗಿತ್ತು!

ಕೆಲಕಾಲ ಅವ್ವನ ಸೆರಗಿನ ಗಂಟಲ್ಲಿ
ಶುಶ್ರೂಷೆಗೊಳಪಟ್ಟು
ಇನ್ನೇನು
ಹೊಟ್ಟೆಹಸಿವಿಗೋ, ಬಟ್ಟೆಬರೆಗೋ
ಕೈಬದಲಿಸಬೇಕೆನ್ನುವಷ್ಟರಲ್ಲಿ
ಹೇರಲಾಯಿತು ನಿಷೇಧ!

ಅದೇ ನೋಟು
ಇನ್ನೂ ನನ್ನ ಬಳಿಯಿದೆ
ಜೇಬು, ಪರ್ಸಿನೊಳಗಡೆಯಲ್ಲ…
ಪುಸ್ತಕದ ಹಾಳೆಯ ನಡುವೆ ಬೆಚ್ಚಗಿದೆ

ಅದರ ಮೇಲೊಂದು
ಕವಿತೆ ಗೀಚಿ
ಅಮಾನ್ಯವಾಗುವುದನ್ನು ತಡೆಹಿದಿದಿದ್ದೇನೆ…


-ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ
*****